ಕಾಂಗ್ರೆಸ್‌ ಪ್ರತಿಭಟನೆ: ಸ್ವಾಯತ್ತ ಸಂಸ್ಥೆಗೆ ಬೆದರಿಕೆ ಹಾಕುವುದು ಸರಿಯಲ್ಲ-ಅಶ್ವತ್ಥನಾರಾಯಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಪಕ್ಷ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಾವು ಮಾಡಿರುವ ತಪ್ಪಿನಿಂದ ರಕ್ಷಣೆ ಪಡೆಯಲು, ಇಡಿ ವಿರುದ್ಧ ನಡೆಸುತ್ತಿರುವ ಹೋರಾಟ ತಂತ್ರವನ್ನು ಸಚಿವ ಅಶ್ವತ್ಥನಾರಾಯಣ ತೀವ್ರವಾಗಿ ಖಂಡಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿ ʻಜಗನ್ನಾಥ ಭವನʼದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಈ ವಿಚಾರದಲ್ಲಿ ಅನುಭವ ಹೊಂದಿದ್ದಾರೆ. ಈಗಾಗಲೇ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಗಾದವರಿಗೆ ಎಲ್ಲವೂ ತಿಳಿದಿರುತ್ತದೆ. ಇಡಿ ತನಿಖೆಗೆ ಕಾಂಗ್ರೆಸ್ ಪಕ್ಷ ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ತಪ್ಪು ಮಾಡಿ ನಮ್ಮನ್ನು ಪ್ರಶ್ನಿಸಬೇಡಿ, ವಿಚಾರಣೆಗೆ ಕರೆಯಬೇಡಿ ಎಂದರೆ ಹೇಗೆ..?. ನಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ದ ಕೆಲಸ ಮಾಡುತ್ತಿದೆ. ಯಾವುದೇ ಪಕ್ಷದ ಭ್ರಷ್ಟಾಚಾರಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಹಾಗೂ ಅದರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

60 ವರ್ಷ ಆಡಳಿತ ನಡೆಸಿದವರಿಗೆ ಕಾನೂನಿನ ಅರಿವಿಲ್ಲವೇ..? ಹೀಗೆ ಪ್ರತಿಭಟನೆ ನಡೆಸುವವರು ಮುಂದೆ ತಿಹಾರ್ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಡಿ ಸ್ವಾಯತ್ತ ಸಂಸ್ಥೆ, ಅದಕ್ಕೆ ಬೆದರಿಕೆ ಹಾಕುವುದು ಎಷ್ಟು ಸರಿ ಎಂದರು. ನ್ಯಾಷನಲ್ ಹೆರಾಲ್ಡ್  ಪತ್ರಿತ್ರಿಕೆಯನ್ನು ಮತ್ತು ಕಚೇರಿಗಳನ್ನು 2008ರಲ್ಲಿ ಮುಚ್ಚಲಾಗಿತ್ತು. 2010ರಲ್ಲಿ ಯಂಗ್ ಇಂಡಿಯನ್ ಸಂಸ್ಥೆಯ ಮೂಲಕ ನ್ಯಾಷನಲ್ ಹೆರಾಲ್ಡ್ ಮತ್ತು ಎಜೆಎಲ್ ಅನ್ನು ಕೊಂಡುಕೊಳ್ಳಲಾಗಿತ್ತು. 2 ಸಾವಿರ ಕೋಟಿಗೂ ಹೆಚ್ಚು ಬೆಲೆಯ ಈ ಸಂಸ್ಥೆಯನ್ನು ಕೇವಲ 50 ಲಕ್ಷ ರೂಪಾಯಿಗೆ ಯಂಗ್ ಇಂಡಿಯನ್ ಸಂಸ್ಥೆಗೆ ಹಸ್ತಾಂತರ ಮಾಡಲಾಗಿತ್ತು. ಕಂಪನಿ ಲಪಟಾಯಿಸುವ ಪ್ರಯತ್ನವನ್ನು ಸುಬ್ರಹ್ಮಣ್ಯನ್ ಸ್ವಾಮಿ ಅವರು ಕೋರ್ಟ್‍ನಲ್ಲಿ ಪ್ರಶ್ನಿಸಿದರು. 2011ರಲ್ಲಿಯೇ ಇ.ಡಿ. ತನಿಖೆಗೆ ಆದೇಶ ಮಾಡಲಾಗಿತ್ತು. ಆಗ ಯು.ಪಿ.ಎ. ಸರ್ಕಾರ ಅಧಿಕಾರದಲ್ಲಿದ್ದರಿಂದ ತನಿಖೆ ಸಾಧ್ಯವಾಗಲಿಲ್ಲ.

ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ. ಅವರಲ್ಲಿ ಪ್ರಾಮಾಣಿಕತೆ, ನೈತಿಕತೆ, ರಾಷ್ಟ್ರೀಯತೆ, ದೇಶಪ್ರೇಮ ಇಲ್ಲ. ಸಮನ್ಸ್ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ಮಾಡಿ ಏನು ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಾವು ಭ್ರಷ್ಟಾಚಾರಿಗಳಾದರೂ ನಮಗೇನೂ ಮಾಡಬಾರದು, ನಾವು ಕಾನೂನಿನಿಂದ ದೊಡ್ಡವರು ಎಂಬ ಧೋರಣೆ ಸರಿಯೇ ಎಂದು ಖಾರವಾಗಿ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!