Monday, August 8, 2022

Latest Posts

ಇನ್ನು ಜಗದಗಲ ‘ಕನ್ನಡ ಮಾತಾಡು’: ರಾಜ್ಯೋತ್ಸವದ ಹೊಸ್ತಿಲಲ್ಲಿ ಇಲಾಖೆಯ ಹೊಸ ಅಭಿಯಾನ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇನ್ನೇನು ವಾರ ಕಳೆದರೆ, ಕನ್ನಡ ರಾಜ್ಯೋತ್ಸವ ಬಂದೇ ಬಿಡುತ್ತದೆ. ಒಂದು ದಿನಕ್ಕೆ ಸೀಮಿತವಾಗಿದ್ದ ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದು ವಾರಕ್ಕೆ ವಿಸ್ತರಿಸುತ್ತಿದೆ. ಇದಕ್ಕಾಗಿ ಹಮ್ಮಿಕೊಂಡದ್ದು, ‘ಕನ್ನಡಕ್ಕಾಗಿ ನಾವು’ ಶೀರ್ಷಿಕೆಯಡಿಯಲ್ಲಿ ‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ.
ವಿ. ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗುತ್ತಿದ್ದಂತೆ ಇಲಾಖೆಯನ್ನು ಪವರ್ ಫುಲ್ ಮಾಡುವ ಜೊತೆಗೆ, ಹೊಸ ರೂಪವನ್ನು ನೀಡುವ ಮಾತನಾಡಿದ್ದರು. ಅದರಂತೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿರುವ ಅವರು, ಕನ್ನಡ ರಾಜ್ಯೋತ್ಸವದ ಸವಿಯನ್ನು ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹಂಚಲು ಮುಂದಾಗಿದ್ದಾರೆ.
ಅ. 24ರಿಂದ 30ರವರೆಗೆ ಒಂದು ವಾರ ಕಾಲ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ನಡೆಯುತ್ತದೆ. ಅಭಿಯಾನದ ಹಿನ್ನೆಲೆಯಲ್ಲಿ 6 ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕರ್ನಾಟಕದ ಹಿರಿಮೆ ಬಿಂಬಿಸುವ ನಾಟಕಗಳು, ನೃತ್ಯ, ಸಂಗೀತ ಕಾರ್ಯಕ್ರಮಗಳಿರುತ್ತವೆ.

ಇನ್ನು ಜಗದಗಲ 'ಕನ್ನಡ ಮಾತಾಡು': ರಾಜ್ಯೋತ್ಸವದ ಹೊಸ್ತಿಲಲ್ಲಿ ಇಲಾಖೆಯ ಹೊಸ ಅಭಿಯಾನ

ಸಾಮೂಹಿಕ ಗಾಯನ ಆಯೋಜಿಸಿದ್ದು, ಅ. 28ರಂದು ಬೆಳಗ್ಗೆ 11 ಗಂಟೆಗೆ ಜರಗಲಿದೆ. ರಾಜ್ಯಾದ್ಯಂತ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಈ ಮೂರು ಹಾಡುಗಳಿಗೆ ಒಂದು ಲಕ್ಷ ಕಂಠಗಳು ಧ್ವನಿಯಾಗಲಿವೆ.
ಮಾತಾಡುವುದು ಮತ್ತು ಬರವಣಿಗೆಯಲ್ಲಿಯೂ ಕನ್ನಡವೇ ಪ್ರಧಾನವಾಗಿರುತ್ತದೆ. ಕನ್ನಡ ಭಾಷೆ ಬೆಳೆಸುವ ಉದ್ದೇಶದಿಂದ ಮೊಬೈಲ್‌ನಲ್ಲಿ ಕನ್ನಡದಲ್ಲೇ ಸಂದೇಶ ಕಳಿಸಬೇಕು. ಜಾಲತಾಣದಲ್ಲಿಯೂ ಕನ್ನಡವನ್ನೇ ಬಳಸಬೇಕು. ಜೊತೆಗೆ ಒಂದೂ ಅನ್ಯಭಾಷೆಯ ಪದಗಳನ್ನು ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ 4 ನಿಮಿಷ ಕಾಲ ನಾಡು-ನುಡಿಯ ಪರಂಪರೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಫಿ ತೆಗೆದು ಕಳುಹಿಸಬೇಕು.
ಈ ಕುರಿತು ಸ್ಪರ್ಧೆಯೂ ಇರುತ್ತದೆ. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ ಬಹುಮಾನ 5ಸಾವಿರ, ದ್ವಿತೀಯ 3ಸಾವಿರ, ತೃತೀಯ 2ಸಾವಿರ ರೂ. ನೀಡಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ 50ಸಾವಿರ, ದ್ವಿತೀಯ 30ಸಾವಿರ ರೂ., ತೃತೀಯ 20ಸಾವಿರ ರೂ. ಬಹುಮಾನವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss