ಹೊಸ ದಿಗಂತ ಆನ್ಲೈನ್ ಡೆಸ್ಕ್:
ಮಹಿಳೆಯರು ಬಟ್ಟೆ ಬದಲಾಯಿಸುವುದುನ್ನು ಚಿತ್ರೀಕರಣ ಮಾಡುವುದನ್ನೇ ಚಾಳಿ ಮಾಡಿಕೊಂಡಿದ್ದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿರುವ ವಿಕೃತ ಕಾಮುಕ ಪೊಲೀಸರ ಅತಿಥಿಯಾಗಿದ್ದಾನೆ.
ಈತನ ಘನಂದಾರಿ ಕೆಲಸ ಗುರುತಿಸಿದ ಪೊಲೀಸರು, ಪೊಲೀಸ್ ಆತಿಥ್ಯದೊಂದಿಗೆ ಠಾಣೆಗೆ ಕರೆತಂದು ಬಳಿಕ ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ.
ಮಾಲತೇಶ್ ಎಂಬ ಹೆಸರಿನ ಈತ ಆಪರೇಷನ್ ಥೇಟರ್ನಲ್ಲಿ ಡ್ಯೂಟಿ ಹಾಕಿಸಿಕೊಂಡಿದ್ದ. ಆಪರೇಷನ್ಗೆ ಹೋಗುವ ಮುನ್ನ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಕೊಠಡಿಯೊಂದರಲ್ಲಿ ಬಟ್ಟೆ ಬದಲಾಯಿಸುತ್ತಿದ್ದುದನ್ನು ಗಮನಿಸಿದ್ದ ಈತ, ಅದನ್ನು ರೆಕಾರ್ಡಿಂಗ್ ಮಾಡಿಕೊಳ್ಳುವ ಉಪಾಯ ಹೂಡಿದ್ದ. ಆ ಕೊಠಡಿಗೆ ಆಪರೇಷನ್ಗೂ ಮುನ್ನ ಹೋಗುತ್ತಿದ್ದ ಈತ ಮೊಬೈಲ್ ಚಾರ್ಜ್ಗೆ ಹಾಕಿ ಬರುವ ಸೋಗಿನಲ್ಲಿ ರೆಕಾರ್ಡಿಂಗ್ ಮೋಡಿನಲ್ಲಿ ಹಾಕಿ ಬರುತ್ತಿದ್ದ. ಇತ್ತೀಚೆಗೆ ಮಹಿಳಾ ವೈದ್ಯರೊಬ್ಬರು ಬಟ್ಟೆ ಬದಲಾಯಿಸಲು ಹೋದಾಗ ಈ ಮೊಬೈಲ್ ನೋಡಿ ಅನುಮಾನಗೊಂಡಿದ್ದರು. ಅದನ್ನು ಪರಿಶೀಲಿಸಿದಾಗ ಮೊಬೈಲ್ ರೆಕಾರ್ಡಿಂಗ್ ಮೋಡ್ ನಲ್ಲಿ ಹಾಕಿರುವುದು ಗೊತ್ತಾಗಿದೆ. ಮೊಬೈಲ್ನಲ್ಲಿ ಮಹಿಳಾ ಸಿಬ್ಬಂದಿಯ ಅನೇಕ ವಿಡಿಯೋಗಳು ಪತ್ತೆಯಾಗಿದ್ದು, ತಕ್ಷಣವೇ ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.