ʼತಾಜ್‌ ಮಹಲ್‌ ಭೂಮಿ ನಮ್ಮ ಪೂರ್ವಿಕರದ್ದು, ದಾಖಲೆ ನೀಡಲು ಸಿದ್ಧʼ ಎಂದ ಜೈಪುರ ರಾಜಕುಮಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರೇಮಸೌಧವೆಂದೇ ಪ್ರಸಿದ್ಧಿ ಪಡೆದಿರುವ ಆಗ್ರಾದ ತಾಜ್‌ಮಹಲ್‌ ನಿರ್ಮಾಣ, ಇತಿಹಾಸದ ಬಗ್ಗೆ ಹಿಂದಿನಿಂದಲೂ ವಿವಾದಗಳಿವೆ. ಆ ಸೌಧ ಮೊಘಲ್ ಚಕ್ರವರ್ತಿ ಷಹಜಹಾನ್ ನಿರ್ಮಿಸಿದ್ದಲ್ಲ ಎಂದು ಬಹಳಷ್ಟು ಮಂದಿ ಹಿಂದಿನಿಂದಲೂ ತಕರಾರು ಎತ್ತುತ್ತಲೇ ಬಂದಿದ್ದಾರೆ. ಇದೀಗ ಜೈಪುರದ ರಾಜಮನೆತನದ ರಾಜಕುಮಾರಿ ಮತ್ತು ಪ್ರಸ್ತುತ ಸವಾಯಿ ಮಾಧೋಪುರದ ಬಿಜೆಪಿ ಸಂಸದೆ ದಿಯಾ ಕುಮಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ತಾಜ್ ಮಹಲ್ ನಿರ್ಮಿಸಿದ ಭೂಮಿ ಮೂಲತಃ ಜೈಪುರದ ದೊರೆ ಜೈ ಸಿಂಗ್‌ಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದಾರೆ. ಈ ಮೂಲಕ ತಾಜ್‌ ಮಹಲ್‌ ಕುರಿತಾಗಿ ಇಷ್ಟು ದಿನ ಚರ್ಚೆಯಾಗುತ್ತಿದ್ದ ವಿಚಾರಕ್ಕೆ ಸ್ಫೋಟಕ ತಿರುವು ನೀಡಿದ್ದಾರೆ.
ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಬ್ಬರು ತಾಜ್‌ಮಹಲ್‌ನಲ್ಲಿ ಹಲವು ವರ್ಷಗಳಿಂದ ಮುಚ್ಚಿರುವ ಕೊಠಡಿಗಳ ಬಾಗಿಲು ತೆರೆಯುವಂತೆ ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದರ ಬೆನ್ನಲ್ಲೇ ದಿಯಾ ಕುಮಾರಿ ಆಡಿರುವ ಮಾತುಗಳು ಮಹತ್ವ ಪಡೆಯುತ್ತಿವೆ. ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾಜ್‌ ಮಹಲ್ ‌ಇರುವ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಅಂದು ಮೊಘಲರು ಒತ್ತುವರಿ ಮಾಡಿಕೊಂಡಿದ್ದರು. ಈ ಭೂಮಿಯಲ್ಲಿ ಮೊದಲು ಸಹ ಅರಮನೆ ಇತ್ತು, ಷಹಜಹಾನ್ ಈ ಭೂಮಿಯನ್ನು ಇಷ್ಟಪಟ್ಟಾಗ, ಅದನ್ನು ಮಹಾರಾಜರಿಂದ ಪಡೆದುಕೊಂಡರು. ಜೈಪುರ ರಾಜಮನೆತನದ ಪುಸ್ತಕಗಳಲ್ಲಿ ಭೂಮಿಗೆ ಸಂಬಂಧಿಸಿದ ದಾಖಲೆಗಳಿವೆ. ಕೋರ್ಟ್ ಹೇಳಿದರೆ ಅವುಗಳನ್ನು ಹಾಜರುಪಡಿಸುತ್ತೇವೆ ಎನ್ನುವ ಮೂಲಕ ತಾಜ್ ಮಹಲ್ ಮೇಲಿನ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ.
ಅರ್ಜಿದಾರರ ವಾದವೇನು..?
ಅಯೋಧ್ಯೆಯ ಬಿಜೆಪಿ ಮುಖಂಡ ಡಾ.ರಜನೀಶ್ ಸಿಂಗ್ ಅವರು ತಾಜ್ ಮಹಲ್​ಗೆ ಸಂಬಂಧಿಸಿದಂತೆ ಯುಪಿಯ ಅಲಹಾಬಾದ್ ಹೈಕೋರ್ಟ್​ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಾಜ್ ಮಹಲ್ ಇರುವ ಸ್ಥಳ ತೇಜೋ ಮಹಾಲಯ ಅಥವಾ ಶಿವಾ ದೇವಾಲಯವಾಗಿತ್ತು. ಮೊಘಲರು ಅದನ್ನು ತಾಜ್‌ ಮಹಲ್‌ ಆಗಿ ಪರಿವರ್ತಿಸಿದ್ದಾರೆ. ಸೌಧದ ಒಳಭಾಗದಲ್ಲಿ ಹಲವು ವರ್ಷಗಳಿಂದ ಮುಚ್ಚಲ್ಪಟ್ಟ ಇಪ್ಪತೆರಡು ಕೊಠಡಿಗಳಲ್ಲಿ ತೇಜೋ ಮಹಲ್‌ ಕುರಿತಾದ ಎಲ್ಲಾ ರಹಸ್ಯಗಳಿವೆ. ಈ ಕೊಠಡಿಗಳನ್ನು ತೆರೆದರೆ ಸತ್ಯ ಜಗತ್ತಿಗೆ ತಿಳಿಯುತ್ತದೆ. ಈ ಬಾಗಿಲುಗಳನ್ನು ತೆಗೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ನಡೆಸಬೇಕೆಂದು ಸಿಂಗ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ತಾಜ್ ಮಹಲ್‌ನಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಶಿಲ್ಪಗಳು ಮತ್ತು ಶಾಸನಗಳು ಇರಬಹುದು. ಸಮೀಕ್ಷೆ ನಡೆದರೆ ತಾಜ್ ಮಹಲ್ ನಲ್ಲಿ ಹಿಂದೂ ವಿಗ್ರಹಗಳು, ಶಾಸನಗಳು ಇವೆಯೇ ಅಥವಾ ಇಲ್ಲವೇ ಎಂಬ ಸತ್ಯಾಂಶ ಗೊತ್ತಾಗಲಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ದಿಯಾ ಕುಮಾರಿ ಅರ್ಜಿದಾರರ ಮನವಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. “ಈ ಬಗ್ಗೆ ಯಾರಾದರೂ ಧ್ವನಿ ಎತ್ತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದು ಒಳ್ಳೆಯ ಬೆಳವಣಿಗೆ” ಎಂದು ಹೇಳಿದ್ದಾರೆ. ಇದರಿಂದ ಸತ್ಯ ಹೊರಬರಲಿದೆ ಎಂದು ದಿಯಾ ಕುಮಾರಿ ಹೇಳಿದ್ದು, ತಮ್ಮ ಬಳಿ ಇರುವ ದಾಖಲೆಗಳು ಸತ್ಯವನ್ನು ಹೊರತರಲು ಸಹಾಯ ಮಾಡುತ್ತವೆ ಮತ್ತು ಅದನ್ನೇ ನ್ಯಾಯಾಲಯಕ್ಕೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!