Sunday, August 14, 2022

Latest Posts

‘ಹೊಸ ಭಾರತ’ಕ್ಕೆ ಕುಹಕ ಮಾಡಿ ಚೀನಾ ಕೃತ್ಯ ಮರೆಮಾಚಲು ಹೋದರೇ ಜೈರಾಂ ರಮೇಶ್?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಂಕಿಅಂಶಗಳಲ್ಲಿ ಮೋಸ ಕಂಡುಬಂದ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್ ತನ್ನ ಪ್ರತಿಷ್ಟಿತ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ವಾರ್ಷಿಕ ಶ್ರೇಯಾಂಕವನ್ನು ಕೈಬಿಟ್ಟಿರುವುದಾಗಿ ಘೋಷಿಸಿದೆ. ಭಾರತವು ಈ ಶ್ರೇಯಾಂಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿವೇಗದ ಪ್ರಗತಿ ಸಾಧಿಸಿತ್ತು. ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಕಾಂಗ್ರೆಸ್ಸಿನ ನೇತಾರರು ಈಗ ಮೋದಿ ಸರ್ಕಾರದ ವಿರುದ್ಧ ಕುಹಕವಾಡುತ್ತಿದ್ದಾರೆ. ಇವರ ಮಾತಿನ ಧಾಟಿ ಹೇಗಿದೆಯೆಂದರೆ ಭಾರತವೇ ಅಂಥ ಸುಳ್ಳು ಅಂಕಿಅಂಶಗಳನ್ನು ಕೊಟ್ಟು ಶ್ರೇಯಾಂಕದಲ್ಲಿ ತನ್ನ ಸ್ಥಾನ ಉತ್ತಮಪಡಿಸಿಕೊಂಡಿತೇನೋ ಎಂದು ಅನುಮಾನ ಪಡುವಂತಿದೆ. 

ಕಾಂಗ್ರೆಸ್ಸಿನ ಜೈರಾಂ ರಮೇಶ್ ಹೀಗೆ ಟ್ವೀಟಿಸಿದ್ದಾರೆ- “2014ರಿಂದೀಚೆಗೆ ಭಾರತ ಏರುಗತಿಯಲ್ಲಿದೆ ಎಂದು ಹೇಳಿಕೊಳ್ಳುವಂತೆ ಮಾಡಿದ್ದ ವಿಶ್ವಬ್ಯಾಂಕಿನ ಉದ್ಯಮ ಸರಾಗ ಶ್ರೇಯಾಂಕವೇ ಈಗ ಬೋಗಸ್ ಎಂದು ನಿಲ್ಲಿಸಲಾಗಿದೆ. ಅವರೇನಾದರೂ ತಿರುಚಿದ ಮಾಹಿತಿಗಳಿಗೆ ಶ್ರೇಯಾಂಕವನ್ನೇನಾದರೂ ತಂದಿದ್ದರೆ ಇವತ್ತಿನ ತಥಾಕಥಿತ ‘ಹೊಸ ಭಾರತ’ ಅಗ್ರಶ್ರೇಣಿಯಲ್ಲಿರುತ್ತಿತ್ತು.”

ಜೈರಾಂ ರಮೇಶ್ ಅವರ ಟ್ವೀಟ್ ಮಾತ್ರ ಓದಿಕೊಂಡವರಿಗೆ ಭಾರತವೇ ಈ ಅಂಕಿಅಂಶ ನೀಡಿಕೆಯಲ್ಲಿ ಮೋಸ ಮಾಡಿದ್ದರಿಂದ ವಿಶ್ವಬ್ಯಾಂಕ್ ಅದನ್ನು ನಿಲ್ಲಿಸಿತು ಎಂದು ಅರ್ಥ ಬರುವಂತಿದೆ. ಆದರೆ ವಿಶ್ವಬ್ಯಾಂಕೇ ಹೇಳಿರುವಂತೆ ಅಂಕಿಅಂಶಗಳ ತಿರುಚುವಿಕೆ ಆಗಿರುವುದೆಲ್ಲಿ ಗೊತ್ತೇ? ಚೀನಾದಲ್ಲಿ. 

ವಿಶ್ವಬ್ಯಾಂಕ್ ಈ ವಿಷಯದಲ್ಲಿ ಹೇಳಿರುವುದರ ಸಾರವಿಷ್ಟು- “ತನಿಖೆಯಿಂದ ತಿಳಿದುಬಂದಿರುವ ಅಂಶವೆಂದರೆ ಈ ಶ್ರೇಯಾಂಕ ತಯಾರಿಸುತ್ತಿದ್ದ ವಿಶ್ವಬ್ಯಾಂಕಿನ ಕೆಲವು ಮಾಜಿ ಅಧಿಕಾರಿಗಳು ಚೀನಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು. ಉದ್ಯಮ ಸರಾಗ ಶ್ರೇಯಾಂಕದಲ್ಲಿ ಚೀನಾವನ್ನು ಮುಂದೆ ತರುವುದು ಹೇಗೆ ಎಂಬ ಬಗ್ಗೆ ಚರ್ಚೆಯನ್ನೂ 2018ರಲ್ಲಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಚೀನಾದಿಂದ ಮಾಹಿತಿಗಳ ತಿರುಚುವಿಕೆ ನಡೆದಿರಬಹುದೆಂಬ ಅನುಮಾನದಲ್ಲಿ ಶ್ರೇಯಾಂಕ ನೀಡುವುದನ್ನು ನಿಲ್ಲಿಸಲಾಗಿದೆ.”

ಹಾಗಾದರೆ, ಭಾರತದ ಮೇಲೆ ಕುಹಕವಾಡಿ ಚೀನಾದ ಕೃತ್ಯವನ್ನು ಮುಚ್ಚಿಡುವುದಕ್ಕೆ ಹೋದರೇ ಜೈರಾಂ ರಮೇಶ್?

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss