ಯಾರ ಬಲವಂತಕ್ಕೂ ಭಾರತ ಜಗ್ಗಲ್ಲ: ಪಾಕ್-ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿದ ಜೈಶಂಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತನ್ನ ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಏನು ಬೇಕಾದರೂ ಮಾಡಲಿದ್ದು, ಯಾರ ಬಲವಂತಕ್ಕೂ ಜಗ್ಗಲ್ಲ ಎಂದು ಇಡೀ ವಿಶ್ವವೇ ನೋಡಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ತುಗ್ಲಕ್ ಮ್ಯಾಗಜಿನ್ನ 53ನೇ ವಾರ್ಷಿಕೋತ್ಸವದದಲ್ಲಿ ಮಾತನಾಡಿದ ಅವರು, ಇಂದು ಭಾರತದ ಇಡೀ ಪ್ರಪಂಚಕ್ಕೆ ಗೌರವವಿದೆ. ಭಾರತವು ಯಾರ ಬಲವಂತಕ್ಕೂ ಬಗ್ಗದ ರಾಷ್ಟ್ರವೆಂಬುದನ್ನು ಇಡೀ ವಿಶ್ವವೇ ನೋಡಿದೆ. ಉತ್ತರ ಗಡಿಯಲ್ಲಿ ಚೀನಾ ದೊಡ್ಡ ಪಡೆಗಳನ್ನು ತಂದು ನಮ್ಮ ಒಪ್ಪಂದಗಳನ್ನು ಉಲ್ಲಂಘಿಸುವ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ನಡೆಸುತ್ತಿದೆ ಎಂದು ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಗುಡುಗಿದರು.

ಗಡಿಯಲ್ಲಿ ನಿಯೋಜನೆಯಾಗಿರುವ ಭಾರತದ ಭದ್ರತಾ ಪಡೆಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ ಗಡಿಗಳನ್ನು ರಕ್ಷಿಸುತ್ತಿವೆ. ಯಾವುದೇ ಬಲಕ್ಕೆ ತಲೆಬಾಗದ ದೇಶದ ಬಗ್ಗೆ ಇದೀಗ ವಿಶ್ವಮಟ್ಟದಲ್ಲಿ ಹೆಚ್ಚಿನ ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ತನ್ನ ರಾಷ್ಟ್ರೀಯ ಭದ್ರತೆಯೇ ಭಾರತದ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ಐತಿಹಾಸಿಕವಾಗಿ ಭಾರತವು ಸದಾ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ತನ್ನದೇ ಹೆಸರು ಹೊಂದಿರುವ ಸಾಗರದಲ್ಲಿ ಭಾರತವು ಎದ್ದು ಕಾಣುತ್ತದೆ. ಇದಕ್ಕೆ ಖಂಡಾಂತರ ಆಯಾಮವೂ ಇದೆ. ನಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಏಷ್ಯಾ ಖಂಡದ ಸಂಪರ್ಕ ಯೋಜನೆಗಳು ಜಾರಿಗೆ ಬರುವುದು ಸಾಧ್ಯವೇ ಇಲ್ಲ. ಹಿಂದೂ ಮಹಾಸಾಗರವು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಪ್ರಸ್ತುತತೆ ಹೊಂದಿದೆ. ಭೂಮಿಯಲ್ಲಿ ತಾನಿರುವ ಸ್ಥಾನವನ್ನು ಭಾರತ ಎನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದು ಎಲ್ಲರೂ ಗಮನಿಸುತ್ತಿರುವ ವಿಷಯವಾಗಿದೆ. ಜಾಗತಿಕ ಮಟ್ಟದ ವಿದ್ಯಮಾನಗಳಲ್ಲಿ ಭಾರತದ ಸಹಭಾಗಿತ್ವವು ಹೆಚ್ಚಾದಂತೆ, ಪ್ರಭಾವವೂ ಹೆಚ್ಚಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!