ರಷ್ಯ ಬಗ್ಗೆ ಭಾರತದ ನಿಲುವನ್ನು ಕೆದಕಿದ ಯುರೋಪಿಯನ್ ಮಿತ್ರರಿಗೆ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ರಾಜಕೀಯದ ಕುರಿತಾಗಿ ಭಾರತದ ವಿದೇಶಾಂಗ ಸಚಿವಾಲಯ ನಡೆಸುವ ಸಂವಾದ ಕಾರ್ಯಕ್ರಮವಾದ ರೈಸೀನಾ ಸಂವಾದ ಕಾರ್ಯಕ್ರಮದಲ್ಲಿ ಯುರೋಪಿಯನ್‌ ನಾಯಕರ ಪ್ರಶ್ನೆಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ತಮ್ಮದೇ ಆದ ರೀತಿಯಲ್ಲಿ ಸ್ಪಷ್ಟ ಉತ್ತರಗಳನ್ನು ಹೇಳುವ ಮೂಲಕ ಜಗತ್ತಿನಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಭಾರತದ ನಿಲುವಿನ ಕುರಿತು ವಿವರಿಸಿದ್ದಾರೆ.

ರಷ್ಯಾದ ಆಕ್ರಮಣಕಾರಿ ಧೋರಣೆ ಹಾಗೂ ಉಕ್ರೇನ್‌ ನಲ್ಲಿ ಶಾಂತಿ ಸ್ಥಾಪನೆಯ ಕುರಿತು ಭಾರತದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಭಾರತದ ನಿಲುವು, ಹೋರಾಟವನ್ನು ತುರ್ತಾಗಿ ನಿಲ್ಲಿಸಿ ರಾಜತಾಂತ್ರಿಕ ಮಾತುಕತೆಗೆ ಮರಳುವುದನ್ನು ಮತ್ತು ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಉಕ್ರೇನ್‌ ವಿಷಯಕ್ಕೆ ಬರುವುದಾದರೆ ಕಳೆದ ವರ್ಷ ಅಪಘಾನಿಸ್ಥಾನದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಒಂದು ಇಡೀ ನಾಗರೀಕತೆಯನ್ನೇ ಬಸ್ಸಿನಡಿಯಲ್ಲಿ ಬಿಟ್ಟು ಬರಲಾಯಿತು ಆದರೂ ಜಗತ್ತು ಏನೂ ಮಾಡಿಲ್ಲ. ಅಲ್ಲಿ ನಿಮಯಮಾಧಾರಿತ ಆದೇಶಗಳ ಪಾಲನೆಗೆ ಜಗತ್ತು ಏನು ಮಾಡಿದೆ?” ಎಂದು ಕೇಳಿರುವ ಅವರು ಮುಂದುವರಿದು “ಏಷ್ಯಾದಲ್ಲಿ ಕಳೆದ ಹತ್ತು ವರ್ಷಗಳಿಂದ ನಿಯಮಾಧಾರಿತ ಆದೇಶಗಳನ್ನು ಪಾಲಿಸಲಾಗುತ್ತಿಲ್ಲ. ಈ ಕುರಿತು ಯುರೋಪ್‌ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏಷ್ಯಾದಲ್ಲಿ ನಿಯಮಾಧಾರಿತ ಆದೇಶಗಳು ಗಾಳಿಗೆ ತೂರಲ್ಪಟ್ಟಾಗ ನೀವು (ಯುರೋಪ್‌) ಹೆಚ್ಚು ವ್ಯಾಪಾರವನ್ನು ಮಾಡಿ ಎಂದು ಸಲಹೆ ನೀಡಿದಿರಿ. ಆದರೆ ಈಗ ನಾವು (ಭಾರತವು) ನಿಮಗೆ ಆ ತರಹದ ಸಲಹೆಗಳನ್ನು ನೀಡುತ್ತಿಲ್ಲ ಎಂಬುದು ತಿಳಿದಿರಲಿ. ಏಷ್ಯಾದಲ್ಲಿನ ಈ ಸಮಸ್ಯೆಗಳು ಯುರೋಪಿಗೆ ಎಚ್ಚರಿಕೆಯ ಕರೆಗಳು ಎಂಬುದನ್ನು ಮರೆಯದಿರಿ” ಎಂದು ಸಲಹೆ ನೀಡಿದ್ದಾರೆ.

ಇದರೊಂದಿಗೆ ಅವರು ಭಾರತದ ನೆರೆಯ ಸಮಸ್ಯೆಯನ್ನೂ ಎತ್ತಿಹಿಡಿದು “ಏಷ್ಯಾದಲ್ಲಿ ಈಗಲೂ ಕೂಡ ನಿಯಮಾಧಾರಿತ ಅದೇಶಗಳನ್ನು ಪಾಲಿಸಲಾಗುತ್ತಿಲ್ಲ, ಕೆಲವು ಭಾಗಗಳಲ್ಲಿ ಇನ್ನೂ ಕೂಡ ಗಡಿಗಳನ್ನು ಇತ್ಯರ್ಥಗೊಳಿಸಿಲ್ಲ, ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಈಗಲೂ ಅಸ್ತಿತ್ವದಲ್ಲಿದೆ, ನಿಯಮಾಧಾರಿತ ಆದೇಶವು ಒಂದು ದಶಕಕ್ಕೂ ಹೆಚ್ಚು ಕಾಲ ಒತ್ತಡದಲ್ಲಿದೆ ಎಂಬುದನ್ನು ಪ್ರಪಂಚದ ಉಳಿದ ಭಾಗಗಳು ಗುರುತಿಸುವುದು ಮುಖ್ಯವಾಗಿದೆ” ಎನ್ನುವ ಮೂಲಕ ಪಾಕಿಸ್ಥಾನ ಮತ್ತು ಚೀನಾ ಸಮಸ್ಯೆಗಳ ಬಗ್ಗೆ ಅವರ ಹೆಸರು ಹೇಳದೆಯೇ ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!