ಅಬುಧಾಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪ್ರಸ್ತುತ ಮೂರುದಿನಗಳ ಯುಎಇ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಮಂತ್ರಿ ಎಸ್.ಜೈಶಂಕರ್‌ ಅವರು ಯುಎಇಯಲ್ಲಿನ ಅಬುಧಾಬಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ದೇವಾಲಯವನ್ನು ಅರಬ್‌ ಪ್ರಸ್ಥಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊದಲ ಸಾಂಪ್ರದಾಯಿಕ ದೇವಾಲಯ ಎನ್ನಲಾಗಿದೆ.

ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ‌ (ಬಿಎಪಿಎಸ್)‌ ಯಿಂದ ಈ ದೇವಾಲಯವು ನಿರ್ಮಾಣವಾಗುತ್ತಿದ್ದು ಪ್ರಸ್ತುತ ದೇವಾಲಯವು ನಿರ್ಮಾಣ ಹಂತದಲ್ಲಿದೆ. ಆ ಸ್ಥಳಕ್ಕೆ ಭೇಟಿ ನೀಡಿದ ಎಸ್‌.ಜೈಶಂಕರ್‌ ಅವರು ದೇವಾಲಯದ ನಿರ್ಮಾಣದ ವೇಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ವತಃ ಟ್ವೀಟ್‌ ಮಾಡಿರುವ ಅವರು “ಗಣೇಶ ಚತುರ್ಥಿಯಂದು, ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಬಿಎಪಿಎಸ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಲಾಯಿತು. ತ್ವರಿತ ಪ್ರಗತಿಯನ್ನು ನೋಡಿ ಸಂತೋಷವಾಯಿತು, ಈ ಕಾರ್ಯದಲ್ಲಿ ಭಾಗಿಯಾದ ಎಲ್ಲರ ಭಕ್ತಿಯನ್ನು ಶ್ಲಾಘಿಸುತ್ತೇನೆ. ಹಾಗೂ ಇದೇ ಸಂದರ್ಭದಲ್ಲಿ ಅಲ್ಲಿ ಹಾಜರಿದ್ದ ಬಿಎಪಿಎಸ್ ತಂಡ, ಸಮುದಾಯದ ಬೆಂಬಲಿಗರು ಮತ್ತು ಭಕ್ತರು ಮತ್ತು ಕೆಲಸಗಾರರನ್ನು ಭೇಟಿ ಮಾಡಲಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಅಲ್ಲದೇ ಯುಎಇಯಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯವು ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆಯ ಸಂಕೇತವೆಂದು ವಿದೇಶಾಂಗ ಮಂತ್ರಿ ಜೈಶಂಕರ್‌ ಶ್ಲಾಘಿಸಿದ್ದಾರೆ.

2015ರ ಪ್ರಧಾನಿ ಮೋದಿ ಭೇಟಿಯ ವೇಳೆ ಇಲ್ಲಿನ ಭಾರತೀಯ ಸಮುದಾಯದವರಿಗೆ ದೇವಾಲಯ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವುದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಅದರಂತೆ 2018ರಲ್ಲಿ 1,700 ಮಂದಿಯ ಸಮ್ಮುಖದಲ್ಲಿ ಪ್ರಧಾನಿ ಮೋದಿ ದೇಗುಲ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ಪ್ರಸ್ತುತ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಮಧ್ಯ ಪ್ರಾಚ್ಯ ಭಾಗದಲ್ಲಿನ ಏಕೈಕ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!