ಜನಸಂಕಲ್ಪ ಯಾತ್ರೆ: ಕಾಂಗ್ರೆಸ್‌ ಭ್ರಷ್ಟಾಚಾರ ರಾಹುಲ್ ಮುಂದೆ ಬಿಚ್ಚಿಡಲಿದ್ದೇವೆ; ಗುಡುಗಿದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ- ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ರವಾನಿಸುತ್ತೇನೆ. ಅವರು ಏನು ಕ್ರಮವಹಿಸುತ್ತಾರೆಂದು ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲೆಸೆದರು.
ಬೀದರ್ ಜಿಲ್ಲೆಯ ಔರಾದ್ ನಲ್ಲಿ ಇಂದು ನಡೆದ ‘ಜನಸಂಕಲ್ಪ’ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯ ಹಗರಣಗಳ ವಿವರವನ್ನು ರಾಹುಲ್ ಗಾಂಧಿಗೆ ಕಳುಹಿಸಿ ಕೊಡಲಿದ್ದೇವೆ. 2016ರ ಶಿಕ್ಷಕರ ನೇಮಕಾತಿ ಹಗರಣ ಸೇರಿ ಎಲ್ಲ ವಿವರ ಕೊಡಲಿದ್ದೇವೆ ಎಂದು ತಿಳಿಸಿದರು. ಅರ್ಜಿ ಹಾಕದವರ ನೇಮಕಾತಿಯೂ ನಡೆದಿದೆ ಎಂದು ವಿವರವನ್ನು ಬಿಚ್ಚಿಟ್ಟರು.
ಪ್ರಾಸಿಕ್ಯೂಟರ್ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲೂ ಹೀಗೇ ಆಗಿತ್ತು. ಆದರೆ, ಎಲ್ಲ ಹಗರಣಗಳನ್ನು ಮುಚ್ಚಿ ಹಾಕಿದ್ದರು. ನಮ್ಮಅವಧಿಯಲ್ಲಿ ಪಿಎಸ್‍ಐ ನೇಮಕಾತಿ ಹಗರಣ ಆದಾಗ ತಪ್ಪು ಮಾಡಿದ್ದವರನ್ನು ಬಂಧಿಸಿದ್ದೇವೆ. ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರೆ. ಹಗರಣಗಳೂ ದೊಡ್ಡವಿವೆ ಎಂದರು.
ಕಳೆದ 3 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಜನಪರ ಆಡಳಿತ ಮತ್ತು ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಮನಗೆದ್ದಿದೆ. ಅತಿವೃಷ್ಟಿ ಸಂಬಂಧ ಪರಿಹಾರವನ್ನು ನಾವು ಹೆಚ್ಚಿಸಿದ್ದೇವೆ. ಡಾಗಳ ಅಭಿವೃದ್ಧಿ, ಬಡವರಿಗೆ ನೆರವಾಗಿದ್ದೇವೆ. 23 ಸಾವಿರ ತಾಂಡಾಗಳನ್ನು ಗ್ರಾಮಗಳನ್ನಾಗಿ ಮಾಡಲು ಆದೇಶ ಮಾಡಲಾಗಿದೆ. ಮನೆಗಳಿಗೆ ಹಕ್ಕಪತ್ರ ನೀಡಲಾಗುತ್ತಿದೆ ಎಂದು ವಿವರಿಸಿದರು.  ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನಲು ಆತ್ಮಸಾಕ್ಷಿ ಬೇಕಲ್ಲವೇ ಎಂದು ಕುಟುಕಿದ ಅವರು, ನಿರ್ಣಯ ತೆಗೆದುಕೊಂಡವರು ಯಾರು ಎಂದು ಪ್ರಶ್ನಿಸಿದರು. ದೀನದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಆರಂಭವಾಗುತ್ತಿದೆ. ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ನೀಡಲಿದ್ದೇವೆ. ಅದಕ್ಕಾಗಿ ಕ್ರಿಯಾ ಯೋಜನೆಯನ್ನೂ ಮಾಡಿದ್ದೇವೆ. 14 ಸಾವಿರ ನೇಮಕಾತಿಗೆ ಅನುಮತಿ ಕೊಟ್ಟಿದ್ದೇವೆ ಎಂದು ವಿವರಿಸಿದರು. ನೀರಾವರಿ ಯೋಜನೆಗೆ ವಿಶೇಷ ಅನುದಾನ ಕೊಟ್ಟಿದ್ದೇವೆ ಎಂದರು. ಪ್ರಭು ಚೌಹಾಣ್, ಭಗವಂತ ಖೂಬಾ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಮಾತನಾಡಿ, ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಈ ಭಾಗದ ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ತಿಳಿಸಿದರು. ಇದಕ್ಕಾಗಿ ಬೊಮ್ಮಾಯಿ ಅವರಿಗೆ ಧನ್ಯವಾದ ಸಮರ್ಪಿಸಿದರು.
ಔರಾದ್ ತಾಲ್ಲೂಕಿನ 36 ಕೋಟಿ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮಂಜೂರಾತಿ ನೀಡಿದ್ದಾರೆ. ಬೀದರ್- ನಾಂದೇಡ್ ರೈಲ್ವೆ ಮಾರ್ಗಕ್ಕೆ ಅನುದಾನದ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಸಂಕಲ್ಪ ಯಾತ್ರೆಯು ಸಂಚಲನ ಉಂಟು ಮಾಡಿದೆ ಎಂದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ಭಾಗದ ನೀರಾವರಿಗೆ ಬಿಜೆಪಿ ಸರಕಾರ ಆದ್ಯತೆ ಕೊಟ್ಟಿದೆ ಎಂದು ತಿಳಿಸಿದರು. ರಾಜ್ಯದ ಸಚಿವರಾದ ಪ್ರಭು ಚೌಹಾಣ್, ಬೈರತಿ ಬಸವರಾಜ್, ಶ್ರೀರಾಮುಲು, ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!