ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟೋಲ್ಲ, ನಾನು ಬಿಜೆಪಿ ಬಿಡೋಲ್ಲ: ಗಾಲಿ ಸೋಮಶೇಖರ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ಸಹೋದರ, ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ಹೊಸ ಪಕ್ಷ ಕಟ್ಟೋಲ್ಲ ಎನ್ನುವ ವಿಶ್ವಾಸವಿದೆ, ಕಟ್ಟಿದರೂ ನಾನಂತೂ ಬಿಜೆಪಿಯಲ್ಲಿಯೇ ಇರುವೆ, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾಜಿ ಸಚಿವ, ಸಹೋದರ ಜನಾರ್ಧನರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ, ಈ ಕುರಿತು ನನಗೆ ಅಧಿಕೃತವಾದ ಮಾಹಿತಿ ಇಲ್ಲ, ನನ್ನ ಪ್ರಕಾರ ಜನಾರ್ಧನ ರೆಡ್ಡಿ ಅವರು ಹೊಸ ಪಕ್ಷವನ್ನು ಕಟ್ಟುವ ಸಾಧ್ಯತೆ ಕಡಿಮೆಯಿದೆ, ಕೆಲ ದಿನಗಳಿಂದ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ, ಅವೆಲ್ಲ ಊಹಾಪೋಹದ ಸುದ್ದಿಗಳು, ಇದಕ್ಕೆ ಮಹತ್ವ ಕೊಡುವುದು ಬೇಡ, ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಪಕ್ಷದಲ್ಲೇ ಉಳಿಯುವಂತೆ ಮನವೊಲಿಸಲಾಗುವುದು, ಈ ಕುರಿತು ಸಚಿವರಾದ ಶ್ರೀರಾಮುಲು ಅವರು ಪಕ್ಷದ ವರೀಷ್ಠರ ಗಮನಕ್ಕೆ ತಂದಿದ್ದು, ಯಾವ ನಿರ್ಧಾರ ತೆಗೆದುಕೊಂಡಿದ್ದಾರೋ ತಿಳಿದಿಲ್ಲ, ಕಳೆದ ನಾಲ್ಕು ದಿನಗಳಿಂದ ಜನಾರ್ಧನ ರೆಡ್ಡಿ ಅವರೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದರು. ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡದಿರುವ ಬಗ್ಗೆ ಒಂದಿಷ್ಟು ಮುನಿಸಿದೆ. ಈ ಕುರಿತು ಸಾರಿಗೆ ಸಚಿವ ಶ್ರೀರಾಮುಲು ಅವರು ವರೀಷ್ಠರೊಂದಿಗೆ ಚೆರ್ಚಿಸಿ, ಸರಿಪಡಿಸುವ ವಿಶ್ವಾಸವಿದೆ,ಇದರ ಜೊತೆಗೆ ಪಕ್ಷದ ವರಿಷ್ಟರೂ ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸುವ ವಿಶ್ವಾಸವಿದೆ, ಎಲ್ಲವೂ ಶ್ರೀಘ್ರದಲ್ಲೇ ಸರಿಯಾಗಲಿದೆ ಎಂದು ಹೇಳಿದರು.
ಒಂದೊಮ್ಮೆ ಬಿಜೆಪಿಗೆ ಜನಾರ್ದನ ರೆಡ್ಡಿ ಅವರನ್ನು ಕರೆದುಕೊಳ್ಳದಿದ್ದರೆ, ಅವರು ಹೊಸ ಪಕ್ಷ ಕಟ್ಟಿದರೆ, ನಿಮ್ಮ ನಿಲುವೇನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನೋ ಈ ಮೊದಲೇ ಹೇರಳಿರುವೆ ಏನೇ ಆದರೂ ನಾನು ಬಿಜೆಪಿಯಲ್ಲೇ ಇರುವೆ, ಪಕ್ಷ ಕಟ್ಟಿದರೇ ನಾನಂತೂ ಹೋಗೋಲ್ಲ, ಬಿಜೆಪಿಯಲ್ಲೇ ಉಳಿಯುವೆ ಎಂದು ತಿಳಿಸಿದರು.
ಜನಾರ್ಧನರೆಡ್ಡಿ ಅವರು ಬಿಜೆಪಿಯ ಕಷ್ಟದ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟು ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರೆಡ್ಡಿ ಅವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ಪಕ್ಷದ ವರೀಷ್ಠರು ಇದನ್ನು ಮರೆತಿಲ್ಲ, ಹೇಮ ರೆಡ್ಡಿ ಮಲ್ಲಮ್ಮ ಸಮುದಾಯದಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ರೆಡ್ಡಿ ಅವರ ಪ್ರಭಾವವಿದೆ. ಅವರನ್ನು ಪಕ್ಷದಲ್ಲಿ ಗುರುತಿಸಿಕೊಂಡರೆ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ಉಪಾಧ್ಯಕ್ಷ ವೀರಶೇಖರ ರೆಡ್ಡಿ, ಕಾರ್ಯದರ್ಶಿ ಅಶೋಕ್ ಕುಮಾರ್, ಓಬಳೇಶ್, ವಿದ್ಯಾಧರ್, ಮಾಧ್ಯಮ ಸಹ ಸಂಚಾಲಕ ರಾಜೀವ್ ತೊಗರಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!