ಹೊಸ ದಿಗಂತ ವರದಿ, ಕೊಪ್ಪಳ:
ದುಬಾರಿ ಔಷಧಿಯ ಹೊರೆಯಿಂದ ಸಾಮಾನ್ಯರು ನಲುಗಿ ಹೋಗಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ
ಅವರು 2018 ರಲ್ಲಿ ಪ್ರಾರಂಭಿಸಿದ ಜನೌಷಧಿ ಮಳಿಗೆಗಳಿಂದ ದೇಶದಾದ್ಯಂತ ಜನರಿಗೆ ಔಷಧಿಯ ಹೊರೆ ತಗ್ಗಿದೆ ಎಂದು
ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾ.ಪಂ. ಬಿಸರಳ್ಳಿ, ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ಎಸ್. ಆಸ್ಪತ್ರೆ, ಶ್ರೀನಿವಾಸ ಹ್ಯಾಟಿ ಅನ್ನದಾನೀಶ್ವರ ಕ್ಲಿನಿಕ್ ಸಹಯೋಗದಲ್ಲಿ ಪ್ರಧಾನಮಂತ್ರಿ ಜನೌಷಧಿ ದಿನಾಚರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಅದಕ್ಕಾಗಿ ಹೆಚ್ಚು ಗಮನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರೆ ಕರೆ ನೀಡಿದ್ದಾರೆ. ವ್ಯಾಯಾಮ, ಧ್ಯಾನದ ಮೂಲಕವೇ ಆರೋಗ್ಯ ಕಾಪಾಡಿಕೊಳ್ಳಬೇಕು. ಇದನ್ನು ಮೀರಿಯೂ ಬರುವ ಕಾಯಿಲೆಗೆ ಅನುಕೂಲಾವಾಗಲಿ, ಸಾಮಾನ್ಯರಿಗೂ ಉತ್ತಮ ಚಿಕಿತ್ಸೆ ದೊರೆಯಲಿ ಎಂದು ಆಯುಷ್ಮಾನ್ ಭಾರತ ಜಾರಿ ಮಾಡಿದ್ದಾರೆ ಎಂದರು.
ಇದಕ್ಕೂ ಮೊದಲು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಆರೋಗ್ಯ ತಪಸಾಣೆ ಶಿಬಿರವನ್ನು ಉದ್ಘಾಟಿಸಿ, ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನಿಯವಾಗಿದೆ. ಕೊಪ್ಪಳದಲ್ಲಿ ಆಸ್ಪತ್ರೆಗಳ ಉತ್ತಮ ಸೇವೆ ದೊರೆಯುವಲ್ಲಿ ಬ್ಲಡ್ ಬ್ಯಾಂಕ್ ಸೇವೆ ಅನನ್ಯವಾಗಿದೆ. ಜನರಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯುವುದಕ್ಕೆ ಸಹಕಾರಿಯಾಗಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಡಿಎಚ್ಓ ಡಾ. ಅಲಕನಂದಾ ಮಾಳಗಿ, ಡಾ. ಮಹೇಶ,
ಕೆ.ಎಸ್. ಆಸ್ಪತ್ರೆಯ ಡಾ. ಬಸವರಾಜ ಅವರು ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಈಶಪ್ಪ ಮಾದಿನೂರು, ಡಾ. ವಿರೇಶ್, ಪಿಎಸ್ಐ ಚಂದ್ರಪ್ಪ, ಗ್ರಾ.ಪಂ. ಅಧ್ಯಕ್ಷ ಸಕ್ಕರಡ್ಡಿ ಹ್ಯಾಟಿ,
ಬಿಸರಳ್ಳಿ ಮತ್ತು ಮೈನಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕರು ಇದ್ದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಡಾ. ಶ್ರೀನಿವಾಸ ಹ್ಯಾಟಿ ಅವರು ಸ್ವಾಗತಿಸಿ, ಛೇರಮನ್ ಸೋಮರಡ್ಡಿ ಅಳವಂಡಿ ಪ್ರಸ್ಥಾವಿಕವಾಗಿ ಮಾತನಾಡಿದರು. ಡಾ. ಚಂದ್ರಶೇಖರ ಕರಮುಡಿ ಅವರ ಕಾರ್ಯಕ್ರಮ ನಿರೂಪಿಸಿದರು.