Wednesday, August 10, 2022

Latest Posts

ಜಾತಿವಾರು ಸಮೀಕ್ಷೆಯ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಹೊಸದಿಗಂತ ವರದಿ, ಶಿವಮೊಗ್ಗ:

ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಅ.30 ರಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ಈದ್ಗಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ತಕ್ಷ ಕೆ.ಎಂ. ರಾಮಚಂದ್ರ ತಿಳಿಸಿದರು.
ಸೋಮವಾರ ಪತ್ರಿಕಾಗೋ಼ಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಮತ್ತು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಂದು ಹೋರಾಟ ಮಾಡಲಾಗುತ್ತದೆ ಎಂದರು.
2015ರಲ್ಲಿ ಅಂದಿನ ಸರ್ಕಾರ ಸುಮಾರು 170 ಕೋಟಿ ರೂ. ವೆಚ್ಚದಲ್ಲಿ ಹೆಚ್. ಕಾಂತರಾಜು ಆಯೋಗದ ನೇತೃತ್ವದಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. 2ಎ ಮೀಸಲಾತಿ ಪಟ್ಟಿಗೆ ಯಾವುದೇ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಎಲ್ಲಾ ರೀತಿಯಿಂದಲೂ ಮುಂದುವರೆದ ಪ್ರಬಲವಾಗಿರುವ ಜಾತಿಗಳನ್ನು ಸೇರಿಸಬಾರದು. ಪ್ರವರ್ಗ 1 ಮತ್ತು 2ಎ ನಲ್ಲಿ ಸುಮಾರು 2 ಕೋಟಿಯಷ್ಟು ಜನಸಂಖ್ಯೆ ಹೊಂದಿದ್ದು, ಕೇವಲ 80 ಕೋಟಿ ರೂ. ಮೀಸಲಿಟ್ಟು, 20 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಹಾಗಾಗಿ ಈ ವರ್ಗಗಳ ಅಭಿವೃದ್ಧಿಗಾಗಿ ದೇವರಾಜು ಅರಸು ಅಭಿವೃದ್ಧಿ ನಿಗಮಕ್ಕೆ 2000 ಕೋಟಿ. ರೂ. ನೀಡಬೇಕು ಮತ್ತ ಇತರೆ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಲಾಗುತ್ತದೆ ಎಂದರು.
ಶಿವಮೊಗ್ಗದಲ್ಲಿ ನಡೆಯುವ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss