Sunday, April 11, 2021

Latest Posts

ಕೃಷಿಯಲ್ಲೇ ಸಂತೃಪ್ತ ಬದುಕು ಕಟ್ಟಿಕೊಂಡ ಎಂಎ ಪದವೀಧರ ಜಯರಾಮ ಶೆಟ್ಟಿ

 ದಿಗಂತ ವರದಿ, ಕಾರ್ಕಳ:

ಮುಂಬೈ ಮಹಾನಗರದಲ್ಲಿ ಜರ್ಮನಿ ಮೂಲದ ಕಂಪೆನಿಯೊಂದರಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಕಂಪೆನಿ ಬಿಟ್ಟು ಬಯಸಿದ್ದು ಮಾತ್ರ ಕೃಷಿ ಕಾಯಕ. 35ವರ್ಷಗಳಿಂದ ಕೃಷಿಯಲ್ಲೇ ಖುಷಿ ಕಾಣುವ ಎಂ.ಎ. ಪದವೀಧರ ಕಾರ್ಕಳ ತಾಲೂಕಿನ ಪೊಸ್ರಾಲು ಕಡಪುಕರಿಯ ಜಯರಾಮ ಶೆಟ್ಟಿ ಮಿಶ್ರ ಬೆಳೆಯ ಮೂಲಕ ಪ್ರಗತಿಪರ ಕೃಷಿಕರೆನಿಸಿಕೊಂಡವರು.

ತಮ್ಮ6 ಎಕರೆ ಜಮೀನಿನಲ್ಲಿ ವಾರ್ಷಿಕ 150 ಕ್ವಿಂಟಾಲ್ ಭತ್ತ ಬೆಳೆಯುವುದರ ಜೊತೆಗೆ 6ಎಕರೆ ಜಮೀನಿನಲ್ಲಿ ವಿವಿಧ ತಳಿಗಳಾದ ಮೊಹಿತ್‌ನಗರ್, ಇಂಡೋನೆಷಿಯ ತಳಿ ಸೈಗನ್, ರತ್ನಗಿರಿ ಮೊದಲಾದ ಮೂರು ಸಾವಿರ ಅಡಿಕೆ ಗಿಡ ನೆಟ್ಟಿದ್ದಾರೆ. ಇದರೊಂದಿಗೆ ಕಳೆದ 7 ವರ್ಷಗಳಿಂದ ಹತ್ತಿರದ 4ಎಕರೆ ಗದ್ದೆಯನ್ನು ಗೇಣಿಗೆ ಪಡೆದು ಅದರಲ್ಲಿ ಭತ್ತ ಬೇಸಾಯ ಮಾಡುತ್ತಿದ್ದಾರೆ. 125 ತೆಂಗು ಹಾಗೂ 100 ವಿವಿಧ ತಳಿಯ ಬಾಳೆಗಿಡ ಬೆಳೆದಿದ್ದಾರೆ. ಇದರೊಂದಿಗೆ ತಮ್ಮ ತೋಟದಲ್ಲಿ ಅಲಸಂಡೆ, ಬೆಂಡೆ, ಕುಂಬಳಕಾಯಿ, ಹರಿವೆ, ಸೌತೆ, ಬಸಳೆ, ಬೂದಿಕುಂಬಳ ಹೀಗೆ ಬಗೆ ಬಗೆಯ ತರಕಾರಿ ಬೆಳೆದು ಮಾದರಿ ಕೃಷಿಕರೆನಿಸಿಕೊಂಡಿದ್ದಾರೆ.

ಯಂತ್ರೋಪಕರಣ ಬಳಕೆ
ಅಡಿಕೆ ತೋಟದಲ್ಲಿ ಸಿಗುವ ಸೋಗೆ, ಅಡಿಕೆ ಹಾಳೆಗಳನ್ನು ತುಂಡರಿಸಲು ಯಂತ್ರ ಬಳಕೆ ಮಾಡುತ್ತಿದ್ದಾರೆ. ಇವುಗಳನ್ನು ದನದ ಹಟ್ಟಿಗೆ ಹಾಕಿ ಸಾವಯವ ಗೊಬ್ಬರ ತಯಾರಿಸುತ್ತಿರುವ ಜಯರಾಮರು ಯಂತ್ರ ಖರೀದಿದಾಗಿ 18 ಸಾವಿರ   ಸಬ್ಸಿಡಿ ಪಡೆದಿರುತ್ತಾರೆ.

ಧಾರ್ಮಿಕ-ಸಾಮಾಜಿಕ ಕಾರ‍್ಯಕ್ಕೂ ದೇಣಿಗೆ
ಕೃಷಿಯಲ್ಲಿ ತಾವೇ ಸಂಪೂರ್ಣವಾಗಿ ತೊಡಗಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಆದಾಯ ಗಳಿಸುವ ಜಯರಾಮರು ಬಂದ ಆದಾಯದಲ್ಲಿ ಒಂದಿಷ್ಟು ಪ್ರಮಾಣ ಧಾರ್ಮಿಕ, ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುತ್ತಾರೆ. ಸಚ್ಚೇರಿಪೇಟೆ ಶನೀಶ್ವರ ಪೂಜೆ, ಮುಚ್ಚೂರು ದುರ್ಗಾಪರಮೇಶ್ವರೀ ದೇಗುಲದ ಜಾತ್ರಾ ಸಂದರ್ಭ ಅನ್ನಸಂತರ್ಪಣೆ ಸೇವಾಕರ್ತರಾಗಿ ಸೇವೆ ಸಲ್ಲಿಸುವ ಇವರು ಸಾಹಿತ್ಯ, ಯಕ್ಷಗಾನ, ಶಾಲೆಗಳಿಗೆ ಕೈಲಾದ ದೇಣಿಗೆ ನೀಡುತ್ತ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕೆ ಕ್ಷೇತ್ರಗಳಿಗೆ ಕೊಡುಗೆ ಸಲ್ಲಿಸಿದ್ದಾರೆ.

ಕೃಷಿಯೊಂದಿಗೆ ಹೈನುಗಾರಿಕೆ
ಕೃಷಿಯೊಂದಿಗೆ ಹೈನುಗಾರಿಕೆಯಲ್ಲೂ ಜಯರಾಮ ಅವರು ಸೈ ಎನಿಸಿಕೊಂಡಿದ್ದಾರೆ.5 ದನ ಸಾಕುತ್ತಿರುವ ಅವರು ಪ್ರತಿದಿನ 30 ಲೀ. ಹಾಲು ಪಡೆಯುತ್ತಿದಾರೆ. ಈ ಮೂಲಕ ಹೈನುಗಾರಿಕೆ ಲಾಭದಾಯಕ ಎಂದು ತೋರಿಸಿಕೊಟ್ಟಿರುವ ಇವರು 5 ವರ್ಷಗಳ ಕಾಲ ಪೊಸ್ರಾಲು ಹಾಲು ಒಕ್ಕೂಟ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss