ಹೊಸದಿಗಂತ ವರದಿ, ಶಿವಮೊಗ್ಗ:
ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಎಚ್.ಡಿ. ದೇವೇಗೌಡರು ಮಾತ್ರ ಕಟ್ಟಲಿಲ್ಲ. ನಾನು ಸೇರಿ ಅನೇಕ ನಾಯಕರು ಸೇರಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಜೆಡಿಎಸ್ ಪಕ್ಷ ಜೆಡಿಎಸ್ ಪಕ್ಷವಾಗಿ ಉಳಿದಿಲ್ಲ. ಕುಟುಂಬದ ಪಕ್ಷವಾಗಿದ್ದು ಜೆಡಿಎಫ್ ಆಗಿದೆ. ಎಫ್ ಅಂದರೆ ಫ್ಯಾಮಿಲಿ ಪಾರ್ಟಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸೊರಬ ತಾಲೂಕಿನ ಕುಬಟೂರು ಗ್ರಾಮದ ಮಾಜಿ ಶಾಸಕ ಎಸ್. ಮಧುಬಂಗಾರಪ್ಪ ಅವರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂವಿಧಾನದ ಬಗ್ಗೆ ಗೌರವ ಹೊಂದಿಲ್ಲ. ಕಾಂಗ್ರೆಸ್ನಿಂದ ಮಾತ್ರ ಅಹಿಂದ ಹಾಗೂ ಬಡವರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಜ್ಯಾತ್ಯಾತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಆಂತರಿಕ ಕೋಮುವಾದಿ ಪಕ್ಷ ಎಂದು ಟೀಕಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಸುಳ್ಳು ಆಶ್ವಾಸನೆಗಳು ಹಾಗೂ ಜನ ವಿರೋಧಿ ನೀತಿಗಳಿಂದ ಜನತೆ ಬೇಸತ್ತು ಹೋಗಿದ್ದು, ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.