Tuesday, August 16, 2022

Latest Posts

ದೇವೇಗೌಡರ ನೇತೃತ್ವದಲ್ಲಿ 2023ಕ್ಕೆ ಜೆಡಿಎಸ್ ಅಧಿಕಾರ: ರೇವಣ್ಣ ಭವಿಷ್ಯ

ಹೊಸ ದಿಗಂತ ವರದಿ, ಪಾಂಡವಪುರ:

ಮುಂದಿನ 2023ರ ವಿಧಾನ ಸಭಾ ಚುನಾವಣೆಯಲ್ಲಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ
ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಈ ಹಿಂದೆ ದೇವೇಗೌಡರ ನೇತೃತ್ವದಲ್ಲಿ 115 ಸ್ಥಾನಗಳನ್ನು ಗೆದ್ದಿದ್ದೆವು. ಮತ್ತೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲೂ ದೇವೇಗೌಡರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಎರಡೂ ರಾಷ್ಟ್ರೀಯ ಪಕ್ಷಕ್ಕೂ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್‌ನವರು ಕೋಮುವಾದಿ ಎಂದು ಬಿಜೆಪಿಯನ್ನು ದೂರು ಇಡುತ್ತಾರೆ. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಎರಡೂ ಪಕ್ಷಗಳು ಒಂದಾದವು ಎಂದು ಉದಾಹರಣೆ ಸಮೇತ ವಿವರಿಸಿದರು.
ಪಕ್ಷದಲ್ಲಿ ನಿಷ್ಠಾವಂತ ಕಾರ‌್ಯಕರ್ತರು ಇದ್ದಾರೆ. ಕಾರ‌್ಯಕರ್ತರಿಗೂ ಅಧಿಕಾರ ಸಿಕ್ಕೇ ಸಿಗುತ್ತೆ. ಇದಕ್ಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯೇ ಸಾಕ್ಷಿ. ಮಾದೇಗೌಡ ಅವರು ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು. ಆದ ಕಾರಣ ಅವರ ಪತ್ನಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಪಕ್ಷದ ಟಿಕೆಟ್‌ನ್ನು ಬೇರೆಯವರಿಗೆ ನೀಡಿದವರು ಯಾರಾದರೂ ಇದ್ದರೆ ಅದು ಪುಟ್ಟರಾಜು ಮಾತ್ರ ಎಂದ ಅವರು, ಈ ಹಿಂದೆ ಪುಟ್ಟರಾಜು ಅವರಿಗೆ ಪಕ್ಷದ ಟಿಕೆಟ್ ನೀಡಿದಾಗ ಅವರು ಅದನ್ನು ಬೇರೆಯವರಿಗೆ ನೀಡಿದ್ದರು. ನಂತರ ತಾವು ಶಾಸಕರಾಗಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ‌್ಯಗಳನ್ನು ಮಾಡಿದ್ದಾರೆ. ಪಾಂಡವಪುರದಲ್ಲಿ ಕೇವಲ ಒಂದೇ ಒಂದು ವಿದ್ಯುತ್ ವಿತರಣಾ ಕೇಂದ್ರ ಇತ್ತುಘಿ. ಈ ಜಿಲ್ಲೆಯ ಎಸ್.ಎಂ.
ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರೂ ಏನೂ ಮಾಡಲಾಗಲಿಲ್ಲ. ನಾನು ಇಂಧನ ಸಚಿವನಾದ ನಂತರ ಪಾಂಡವಪುರ ಕ್ಷೇತ್ರದಲ್ಲಿ ಸಾಕಷ್ಟು ವಿದ್ಯುತ್ ವಿತರಣಾ ಕೇಂದ್ರಗಳನ್ನು ಮಾಡಿದ್ದೇವೆ. ವಲಯ ಕಚೇರಿಯನ್ನು ಮಂಡ್ಯಲ್ಲಿ ತೆರೆಯಲಾಗಿದೆ. ಕುಮಾರಸ್ವಾಮಿ ಆಡಳಿತಾವಧಿಯಲ್ಲಿ 1500 ಪ್ರೌಢಶಾಲೆಗಳು, 600 ಪಿಯು ಕಾಲೇಜು, 250 ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಯಿತು. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲೇ ಸುಮಾರು 3 ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss