ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮಂಗಳೂರು:
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪ್ರೋತ್ಸಾಹ ಅತಿಮುಖ್ಯ. ಕ್ರೀಡಾಪಟುಗಳಲ್ಲಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಿದರೆ ಸಾಧಿಸುವುದು ಕಷ್ಟವೇನಲ್ಲ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದ ಶ್ಲಾಘನೀಯ ವಿಚಾರ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕ ಡಾ.ವಾಮನ ಶೆಣೈ ಹೇಳಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಕ್ರೀಡಾ ಭಾರತಿ ಮಂಗಳೂರು ವತಿಯಿಂದ ನಗರದ ಸಂಘನಿಕೇತನದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾಭಾರತಿ ಧ್ಯಾನ್ಚಂದ್ ಪ್ರಶಸ್ತಿ, ಜೀಜಾಬಾಯಿ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಭಾರತಿ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯ ನಿರಂತರವಾಗಿ ನಡೆಯಬೇಕು. ಜನಸಂಖ್ಯೆಯಲ್ಲಿ ಭಾರತ ಜಗತ್ತಿನ ಎರಡನೇ ಅತೀ ದೊಡ್ಡ ದೇಶ. ನಮ್ಮಲ್ಲಿ ಸಾವಿರಾರು ಮಂದಿ ಪ್ರತಿಭಾನ್ವಿತರಿದ್ದಾರೆ. ಅವರಿಗೆ ಸರಿಯಾದ ದಿಕ್ಕು ತೋರಿಸಬೇಕು. ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಆಶಾದಾಯಕವಾಗಿದೆ ಎಂದವರು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಕೀಡಾ ಭಾರತಿ ವತಿಯಿಂದ ಅಂತಾರಾಷ್ಟ್ರೀಯ ಕಬಡ್ಡಿ ತೀರ್ಪುಗಾರ, ಕ್ರೀಡಾ ಪೋಷಕರಾದ ಪ್ರೇಮನಾಥ್ ಉಳ್ಳಾಲ್ ಅವರಿಗೆ `ಕ್ರೀಡಾಭಾರತಿ ಧ್ಯಾನ್ಚಂದ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಜಾನಪದ ಕ್ರೀಡೆ ಕಂಬಳದ ಓಟಗಾರ ಶ್ರೀನಿವಾಸ ಗೌಡ, ಜಾವೆಲಿನ್ ಎಸೆತದ ಸಾಧಕಿ ರಮ್ಯಶ್ರೀ ಜೈನ್ ಮತ್ತು ಯೋಗಪಟು ಪ್ರಣಮ್ಯ ಅವರಿಗೆ `ಕ್ರೀಡಾಭಾರತಿ ಜೀಜಾಬಾಯಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಆನ್ಲೈನ್ನಲ್ಲಿ ಏರ್ಪಡಿಸಿದ್ದ ಕ್ರೀಡಾ ರಸಪ್ರಶ್ನೆಯಲ್ಲಿ ದ.ಕ. ಉಡುಪಿ, ಕೊಡಗು ಜಿಲ್ಲೆಯ 651 ಮಂದಿ ಭಾಗವಹಿಸಿದ್ದು, ಇದರ 10 ಮಂದಿ ವಿಜೇತರಿಗೆ ಮತ್ತು ಆನ್ಲೈನ್ ಕ್ರೀಡಾ ಭಾಷಣ ಸ್ಪರ್ಧೆಯಲ್ಲಿ 434ಮಂದಿ ಭಾಗವಹಿಸಿದ್ದು, ಇದರ ೬ ಮಂದಿ ವಿಜೇತರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಅಲ್ಲದೆ ವಿಶ್ವ ಗಿನ್ನಿಸ್ ದಾಖಲೆ ಮಾಡಿದ ಸಾಧಕ ರಕ್ಷಿತ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.
ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಮಾಜಿ ಉಸ್ತುವಾರಿ ಸಚಿವ ಮತ್ತು ಕ್ರೀಡಾಭಾರತಿ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ ಆಚಾರ್, ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜಾ, ಮಂಗಳೂರು ಉತ್ತರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ, ಕ್ರೀಡಾಭಾರತಿ ಸಂಯೋಜಕ ಭೋಜರಾಜ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಎ.ಕೃಷ್ಣ ಶೆಟ್ಟಿ ತಾರೆಮಾರ್, ಜೊತೆ ಕಾರ್ಯದರ್ಶಿಗಳಾದ ಹರೀಶ್ ರೈ ಬಿ., ಡಾ.ಕರುಣಾಕರ ಶೆಟ್ಟಿ, ಮಹಿಳಾ ಪ್ರಮುಖ್ ಹೇಮಪ್ರಭಾ ಲಾಲ ಮತ್ತಿತರರು ಉಪಸ್ಥಿತರಿದದ್ದರು.
ಕ್ರೀಡಾಭಾರತಿ ಅಧ್ಯಕ್ಷ ಕಾರಿಯಪ್ಪ ರೈ ಕೆ ಸ್ವಾಗತಿಸಿ, ಅಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.