ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………
ಹೊಸ ದಿಗಂತ ವರದಿ, ಮಂಗಳೂರು:
ಜ್ಯುವೆಲ್ಲರಿ ಕಾವಲುಗಾರನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ ಸೊತ್ತುಗಳ ಸಹಿತ ಪರಾರಿಯಾಗುತ್ತಿದ್ದ ಆರೋಪಿಗಳ ವಾಹನವನ್ನು ವಶಕ್ಕೆ ಪಡೆದು, ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಜು.26ರ ಬೆಳಗ್ಗಿನ ಜಾವ 4.45ರ ಸುಮಾರಿಗೆ ಉಳ್ಳಾಲ ಠಾಣೆಯ ಉಪ ನಿರೀಕ್ಷಕ ಟಿ.ಆರ್.ಪ್ರದೀಪ್ ಮತ್ತು ಸಿಬ್ಬಂದಿ ಕೆ.ಸಿ.ರೋಡು ಬಳಿ ಮಂಜೇಶ್ವರ ಕಡೆಯಿಂದ ಬಂದ ಕಾರು ಕೆಎ 02 ಎಎ 8239 ಇನ್ನೋವಾ ಕಾರನ್ನು ಪರಿಶೀಲಿಸಲು ಮುಂದಾದಾಗ ಆರೋಪಿಗಳು ಹಲ್ಲೆಗೆ ಮುಂದಾಗಿ ಕಾರು ಬಿಟ್ಟು ಪರಾರಿಯಾಗಿದ್ದರು.
ಬಳಿಕ ಕಾರನ್ನು ವಶ ಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿ 7.75 ಕೆ.ಜಿ ಬೆಳ್ಳಿ, ರೂ.1.9 ಲಕ್ಷ ನಗದು, ವಿವಿಧ ರೀತಿಯ ಬಣ್ಣ ಬಣ್ಣದ 30 ಹರಳುಗಳು, ವಿವಿಧ ಕಂಪೆನಿಗಳ ಕೈಗಡಿಯಾರಗಳು, ಡಿವಿಆರ್, ಕಬ್ಬಿಣದ ಕತ್ತರಿ, ಮೆಣಸಿನ ಹುಡಿ ಪ್ಯಾಕೆಟ್, ಸ್ಪ್ರೇ ಪೈಂಟ್ ಡಬ್ಬಿ, ಎಲೆಕ್ಟ್ರಾನಿಕ್ ತೂಕದ ಮಾಪಕ, ಸೈರನ್ ಮೆಶಿನ್, ಸಣ್ಣ ಗ್ಯಾಸ್ ಸಿಲಿಂಡರ್, ಒಂದು ಕೆಎಲ್ ನಂಬರ್ ಪ್ಲೇಟ್, ಕಬ್ಬಿಣದ ರಾಡು ಮತ್ತು ಮಚ್ಚು ಪತ್ತೆಯಾಗಿದೆ.
ವಶ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ.14,35,500ಎಂದು ಅಂದಾಜಿಸಲಾಗಿದೆ. ಪತ್ತೆಯಾದ ಸೊತ್ತುಗಳು ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಯ ವಾಚ್ಮನ್ಗೆ ಹಲ್ಲೆ ನಡೆಸಿ, ಆತನನ್ನು ಕಟ್ಟಿ ಹಾಕಿ ದರೋಡೆ ಮಾಡಿರುವುದಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾದವರು ಫರಂಗಿಪೇಟೆಯ ಮಹಮ್ಮದ್ ಗೌಸ್, ಸುರತ್ಕಲ್ನ ಇಮ್ರಾನ್ ಮತ್ತು ಇತರರು ಎಂದು ತಿಳಿದು ಬಂದಿದೆ. ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.