ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಬಳ್ಳಾರಿ:
ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಜಿಲ್ಲೆಯ ಜಿಂದಾಲ್ ಕಾರ್ಖಾನೆ ಆವರಣದಲ್ಲಿರುವ ವಿವಿಧ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದನೆ ಹಾಗೂ ಟ್ಯಾಂಕರ್ಗಳಿಗೆ ಆಕ್ಸಿಜನ್ ಭರ್ತಿ ಮಾಡುವ ಪ್ರಕಿಯೆಯನ್ನು ಶನಿವಾರ ಪರಿಶೀಲಿಸಿದರು. ನಂತರ ಸಚುವ ಜಗಧೀಶ್ ಶೆಟ್ಟರ್ ಅವರು ಮಾತನಾಡಿ, ಆಕ್ಸಿಜನ್ ಉತ್ಪಾದನೆಯ ಮಾಹಿತಿಯನ್ನು ಪಡೆದುಕೊಂಡ ಅವರು ಕೈಗಾರಿಕೆಗೆ ಬಳಸಲಾಗುತ್ತಿರುವ ಆಕ್ಸಿಜನ್ ಪ್ರಮಾಣ ಕಡಿತಗೊಳಿಸಿ ವೈದ್ಯಕೀಯ ಕ್ಷೇತ್ರಕ್ಕೆ ಒದಗಿಸಿ ಎಂದು ಸೂಚನೆ ನೀಡಿದರು.
ಈಗ ಉತ್ಪಾದಿಸಲಾಗುತ್ತಿರುವ ಆಕ್ಸಿಜನ್ ಪ್ರಮಾಣವನ್ನು 1 ಸಾವಿರದಿಂದ 1200 ಮೆಟ್ರಿಕ್ ಟನ್ವರೆಗೆ ಹೆಚ್ಚಿಸಲು ಜಿಂದಾಲ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ಗಿಂತ ಮುಂಚೆ ನಿತ್ಯ 350ರಿಂದ 400 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಿ ಕೈಗಾರಿಕೆ,ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಳಸಿಕೊಳ್ಳಲಾಗುತ್ತಿತ್ತು;ಕೋವಿಡ್ ಹಿನ್ನಲೆಯಲ್ಲಿ ಹಂತಹಂತವಾಗಿ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸಿ ಸದ್ಯ 900 ಟನ್ವರೆಗೆ ನಿತ್ಯ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ ಎಂದು ಜಿಂದಾಲ್ ಅಧಿಕಾರಿ ಪ್ರಭು ಅವರು ಸಚಿವರಾದ ಶೆಟ್ಟರ್ ಅವರಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿರುವ ಈಗಿನ ಸೊಂಕಿನ ಲಕ್ಷಣಗಳನ್ನು ಗಮನಿಸಿದರೇ ನಿತ್ಯ 1700 ಮೆಟ್ರಿಕ್ ಟನ್ ಆಕ್ಸಿಜನ್ ಕರ್ನಾಟಕಕ್ಕೆ ಅಗತ್ಯವಿದೆ;ಕೇಂದ್ರ ಸರಕಾರ 1200 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದು,ಅಷ್ಟು ಪ್ರಮಾಣದಲ್ಲಿ ರಾಜ್ಯಕ್ಕೆ ಸರಬರಾಜದಲ್ಲಿ ಉತ್ತಮ ರೀತಿಯಿಂದ ನಿರ್ವಹಣೆ ಮಾಡಬಹುದಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಜಿಂದಾಲ್ ಸೇರಿದಂತೆ ರಾಜ್ಯದ ಇತರ ಉದ್ದಿಮೆಗಳಿಗೂ ಆಕ್ಸಿಜನ್ ಉತ್ಪಾದನಾ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ ಮತ್ತು ಭದ್ರವಾತಿ,ರಾಯಚೂರು,ಕೊಪ್ಪಳದಲ್ಲಿ ಸ್ಥಗಿತವಾಗಿರುವ ಆಕ್ಸಿಜನ್ ಉತ್ಪಾದಿಸುವ ಕೈಗಾರಿಕೆಗಳನ್ನು ಪುನಃ ಆರಂಭಿಸಲು ಸೂಚಿಸಲಾಗಿದೆ ಎಂದರು.
ಜಿಂದಾಲ್ ಕಾರ್ಖಾನೆಯು ಪ್ರತಿನಿತ್ಯ 900ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಅದರಲ್ಲಿ ರಾಜ್ಯಕ್ಕೆ ಪ್ರತಿನಿತ್ಯ 650 ಮೆಟ್ರಿಕ್ ಟನ್ ಇಲ್ಲಿಂದ ಸರಬರಾಜಾಗುತ್ತಿದೆ ಎಂದು ತಿಳಿಸಿದ ಸಚಿವ ಜಗದೀಶ್ ಶೆಟ್ಟರ್ ಅವರು ಜಿಂದಾಲ್ ಕಾರ್ಖಾನೆ ಸಂಕಷ್ಟದ ಸಮಯದಲ್ಲಿ ಇಡೀ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದೆ. ಜಿಂದಾಲ್ನ ಇತರೆ ಸ್ಟೀಲ್ ಉತ್ಪಾದನಾ ಕಾರ್ಯಗಳಿಗೆ ಆಕ್ಸಿಜನ್ ಕಡಿಮೆ ಮಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆಕ್ಸಿಜನ್ ಉತ್ಪಾದನೆ ಮಾಡಿ ನೀಡುವಂತೆ ತಿಳಿಸಲಾಗಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದರು.
ನಮ್ಮ ನಿರೀಕ್ಷೆಗೂ ಮೀರಿ ಕೊರೊನಾ ವೇಗವಾಗಿ ಹರಡುತ್ತಿದೆ. ಕೋವಿಡ್ ಎರಡನೇ ಅಲೆಯು ಮೊದಲನೆಯ ಅಲೆಗಿಂತ ಎರಡರಿಂದ ಮೂರುಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವಿವರಿಸಿದ ಸಚಿವ ಶೆಟ್ಟರ್ ಅವರು ಸರಕಾರ ಜನತಾ ಕಫ್ರ್ಯೂಗಿಂತ ಕಠಿಣವಿರುವ ನಿರ್ಬಂಧಗಳನ್ನು ಜಾರಿಗೆ ತಂದಿದೆ ಎಂದರು.
ನಂತರ ಜಿಂದಾಲ್ನಲ್ಲಿ ಸಚಿವರು,ಶಾಸಕರು, ಸಂಸದರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಶೆಟ್ಟರ್ ಅವರು ಬಳ್ಳಾರಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ,ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಇದಕ್ಕೂ ಮುಂಚೆ ಅವರು ಜಿಂದಾಲ್ ಎದುರುಗಡೆ ನಿರ್ಮಾಣ ಮಾಡಲಾಗುತ್ತಿರುವ 1ಸಾವಿರ ಆಕ್ಸಿಜನ್ ಹಾಸಿಗೆಯುಳ್ಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಕಾರ್ಯ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ,ಇ.ತುಕಾರಾಂ,ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಇತರರು ಇದ್ದರು.