ಹೊಸ ದಿಗಂತ ವರದಿ, ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕಿನ ಜೋಗಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಗೆ ಭೇಟಿ ನೀಡಿದ ಸಚಿವರನ್ನು ಶಾಲಾ ಮಕ್ಕಳು ವಿವಿಧ ಹೂವು ನೀಡಿ ಸ್ವಾಗತಿಸಿದರು. ನಂತರ ಸಚಿವರು ಶಾಲಾ ಆವರಣದಲ್ಲಿ ಸಸಿ ನೆಟ್ಟು, ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಿಸಿದರು.
ನಂತರ ಸಚಿವರು ಜೋಗಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿ ಹಾಗೂ ಶಾಲಾ ಕಾಂಪೌಂಡ್ ಆವರಣ ಮತ್ತು ಶಾಲಾ ವಾತವರಣ ವೀಕ್ಷಿಸಿ, ಶಾಲಾ ಮಕ್ಕಳೊಂದಿಗೆ ಶಾಲೆ ಆರಂಭವಾದ ಕುರಿತು ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಲ್ಲಿ ಕ್ರಾಂತಿಯಾಗಬೇಕು. ನಾವು ಜ್ಞಾನ ಪಡೆದಾಗ ಮತ್ತು ಶಿಕ್ಷಿತರಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಲೆಗೆ ಶೌಚಾಲಯ, ಹೆಚ್ಚುವರಿ ಕಟ್ಟಡ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣ ಸೇರಿದಂತೆ ಶಾಲೆಗೆ ಅಗತ್ಯವಿರುವ ಮೂಲಸೌಲಭ್ಯ ಕಲ್ಪಿಸಿಕೊಡುವಂತೆ ಜೋಗಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸಚಿವರಿಗೆ ಮನವಿ ಮಾಡಿದರು.
ಜೋಗಿಹಟ್ಟಿ ಗ್ರಾಮಕ್ಕೆ ಪ್ರೌಢಶಾಲೆ, ಎ ಕೆ ಕಾಲೋನಿಗೆ ಸಮುದಾಯ ಭವನ, ಸಾರಿಗೆ ಸಂಪರ್ಕ ವ್ಯವಸ್ಥೆ, 1ರಿಂದ 7 ತರಗತಿ ಮಕ್ಕಳಿಗಾಗಿ ವಸತಿಯುತ ಶಾಲೆ, ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.
ಗ್ರಾಮಸ್ಥರ ಹಾಗೂ ಶಿಕ್ಷಕರ ಮನವಿ ಆಲಿಸಿದ ಸಚಿವರು ಮುಂದಿನ ಎರಡು ತಿಂಗಳಲ್ಲಿ ಗ್ರಾಮದಲ್ಲಿ ನೂತನ ಪ್ರೌಢಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸೋಣ ಹಾಗೂ ಮುಂದಿನ ವರ್ಷ ಶಾಲಾ ಕಟ್ಟಡ, ಶೌಚಾಲಯ, ಸಮುದಾಯ ಭವನ, ನಿವೇಶನ ಮಂಜೂರು ಮಾಡುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ೨೨೪ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ನೋಟ್ಬುಕ್ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಟಿ. ಗೋವಿಂದಪ್ಪ, ಮೀಸೆ ಮಹಾಲಿಂಗಪ್ಪ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್. ಮಹಾಂತೇಶ ಸೇರಿದಂತೆ ಮತ್ತಿತರರು ಇದ್ದರು.