ಜ್ಞಾನವಾಪಿದ ಎಲ್ಲಾ ಕೇಸ್‌ಗಳನ್ನು ಒಟ್ಟಾಗಿ ವಿಚಾರಣೆ: ವಾರಣಾಸಿ ಕೋರ್ಟ್‌ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಏಳೂ ಪ್ರಕರಣಗಳನ್ನು ಒಟ್ಟಿಗೇ ವಿಚಾರಣೆ ನಡೆಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಶೃಂಗಾರ್ ಗೌರಿ- ಜ್ಞಾನವಾಪಿ ಪ್ರಕರಣದ ಅರ್ಜಿದಾರರಾದ ಲಕ್ಷ್ಮಿ ದೇವಿ, ರೇಖಾ ಪಾಠಕ್, ಸೀತಾ ಸಾಹು ಮತ್ತು ಮಂಜು ವ್ಯಾಸ್ ಅವರು ಏಳು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರು ಪ್ರತಿವಾದಿಗಳ ಆಕ್ಷೇಪದ ನಡುವೆಯೂ ತಮ್ಮ ವಿಶೇಷ ಅಧಿಕಾರ ಚಲಾಯಿಸಿ, ಪ್ರಕರಣಗಳನ್ನು ಕ್ರೋಢೀಕರಿಸಿ ವಿಚಾರಣೆ ನಡೆಸಲು ಆದೇಶ ನೀಡಿದರು.

‘ಜ್ಞಾನವಾಪಿ ಮಾದರಿಯ ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದಲ್ಲಿ ವ್ಯತಿರಕ್ತ ಆದೇಶಗಳು ಬರುವ ಸಾಧ್ಯತೆ ಇದೆ. ಹಾಗಾಗಿ, ಈ ಎಲ್ಲ ಪ್ರಕರಣಗಳು ಒಂದೇ ನ್ಯಾಯಾಲಯದಲ್ಲಿದ್ದರೆ ಈ ಪ್ರಕರಣಗಳಲ್ಲಿ ಯಾವುದೇ ವ್ಯತಿರಿಕ್ತ ಆದೇಶ ಬರುವ ಸಾಧ್ಯತೆ ಇರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

‘ಒಂದೇ ನ್ಯಾಯಾಲಯದಲ್ಲಿ ಎರಡು ಅಥವಾ ಹೆಚ್ಚಿನ ಪ್ರಕರಣಗಳು ಬಾಕಿ ಇರುವಾಗ ಮತ್ತು ನ್ಯಾಯದ ಹಿತಾಸಕ್ತಿಯಿಂದ ನ್ಯಾಯಾಲಯವು ಅಭಿಪ್ರಾಯಪಟ್ಟರೆ, ಅವುಗಳ ಜಂಟಿ ವಿಚಾರಣೆಗೆ ಆದೇಶಿಸಬಹುದು’ ಎಂದು ಸಿಪಿಸಿಯ 4ಎ ಆದೇಶವನ್ನು ಉಲ್ಲೇಖಿಸಿ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಮುಸ್ಲಿಮರ ಪರ ವಾದ ಮಂಡಿಸಿದ್ದ ವಕೀಲ ಮೊಹಮ್ಮದ್ ತೊಹಿದ್ ಖಾನ್ ಅವರು, ಎಲ್ಲಾ ಏಳು ಪ್ರಕರಣಗಳ ವಿಚಾರಣೆಯನ್ನು ವಿರೋಧಿಸಿದರು. ‘ಜ್ಞಾನವಾಪಿಗೆ ಸಂಬಂಧಿಸಿದ ವಿಷಯಗಳು ಇನ್ನೂ ಒಂದು ಹಂತಕ್ಕೆ ಬಂದಿಲ್ಲ, ಅವುಗಳನ್ನು ಒಟ್ಟಿಗೆ ಆಲಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 7ಕ್ಕೆ ನಿಗದಿ ಮಾಡಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!