ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಶಿವಮೊಗ್ಗ :
ಆಸ್ತಿ ತೆರಿಗೆ ಹೆಚ್ಚಳ ವಾಪಸ್ ಪಡೆಯುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ವತಿಯಿಂದ ಜು.9 ರಂದು ಬೆಳಗ್ಗೆ
11 ಗಂಟೆಗೆ ಗೋಪಿ ವೃತ್ತದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 10 ಸಾವಿರ ಪೋಸ್ಟ್ ಕಾರ್ಡ್ಗಳನ್ನು ಮುಖ್ಯಮಂತ್ರಿಗೆ ಬರೆಯಲಾಗುತ್ತದೆ. 2021 ನೇ ಸಾಲಿನ ಆಸ್ತಿ ತೆರಿಗೆ ತಿದ್ದುಪಡಿ ಕಾನೂನು ವಾಪಸ್ ಪಡೆಯಬೇಕು. ಶೇ.50 ರಷ್ಟು ತೆರಿಗೆ ರಿಯಾಯ್ತಿ ಈ ವರ್ಷ ನೀಡುವಂತೆ ಪತ್ರದಲ್ಲಿ ಆಗ್ರಹಿಸಲಾಗುತ್ತದೆ. ನಗರದ ಆಸ್ತಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಎಸ್ಆರ್ ದರ ಆಧಾರಿತ ತೆರಿಗೆ ಕೈಬಿಡಬೇಕು. ಕೋವಿಡ್ ಸಂಕಷ್ಟದ ಈ ದಿನಗಳಲ್ಲಿ ತೆರಿಗೆ ಏರಿಕೆ ಮಾಡಬಾರದು. ಇಂದಿನ ಸ್ಥಿತಿಗೆ ಅನುಗುಣವಾಗಿ ಶೇ.50 ರಷ್ಟು ತೆರಿಗೆ ರಿಯಾಯಿತಿ ನೀಡದಿದ್ದರೆ ಜನ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಇದೇ ರೀತಿ ಆಸ್ತ್ತಿ ತೆರಿಗೆ ಹೆಚ್ಚಳ ಮಾಡಿದರೆ ತೆರಿಗೆ ಪಾವತಿಸಲು ಸಾಧ್ಯವಾಗದೆ ಮಾಲೀಕರು ಆಸ್ತಿ ಮಾರಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಪ್ರತೀ ವರ್ಷ ಎಸ್ಆರ್ ದರ ಪರಿಷ್ಕರಣೆ ಮಾಡಿ ಅದನ್ನು ಪಾಲಿಕೆಯ ತೆರಿಗೆ ಒಳಪಡಿಸುವುದರಿಂದ ಖಾಲಿ ನಿವೇಶನಗಳ ಮಾಲೀಕರು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂದರು.
ತೆರಿಗೆ ಹೆಚ್ಚಳ ಮಾಡಿರುವುದು ಪಾಲಿಕೆಯ ವಿರೋಧ ಪಕ್ಷದ ಸದಸ್ಯರ ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಸಭಾ ನಡಾವಳಿಯಲ್ಲಿ ಚರ್ಚೆಗೆ ಬಂದರೆ ಅದರ ವಿರುದ್ಧ ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ಸಭೆಯ ಮುಂದೆ ವಿಷಯ ಬರುಷ್ಟರಲ್ಲಿ ಜನ ತೆರಿಗೆ ಕಟ್ಟಿರುತ್ತಾರೆ. ಇದರಿಂದಾಗಿ ವಿರೋಧ ಪಕ್ಷಗಳು ಕೂಡ ಈ ಬಗ್ಗೆ ದನಿ ಎತ್ತಬೇಕಿದೆ ಎಂದರು.