Wednesday, August 10, 2022

Latest Posts

ಕಬೀರಾನಂದಮಠ ಜಾತ್ಯಾತೀತ ಮಠ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್

ಹೊಸ ದಿಗಂತ ವರದಿ, ಚಿತ್ರದುರ್ಗ:

ಕಬೀರಾನಂದಾಶ್ರಮ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಜಾತ್ಯಾತೀತವಾಗಿದೆ. ಬೇರೆ ಮಠಗಳಂತೆ ಶಿಕ್ಷಣ ಸಂಸ್ಥೆಗಳು, ಆಸ್ತಿ ಮಾಡದೆ ಭಕ್ತಾಧಿಗಳ ಮನೆಯಲ್ಲಿ ಮನೆ ಮಾಡಿ ಅವರ ಪ್ರೀತಿ ವಿಶ್ವಾಸ ಗಳಿಸಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಟಿ.ಬದರಿನಾಥ್ ಹೇಳಿದರು.
ನಗರದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 91ನೇ ಶಿವರಾತ್ರಿ ಮಹೋತ್ಸದವ ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಬೀರಾನಂದಾಶ್ರಮ ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ, ಗೋಶಾಲೆ ತೆರೆದು ಗೋಸಂಪತ್ತನ್ನು ರಕ್ಷಿಸುವ ಕಾರ್ಯ ಮಾಡಿದೆ. ತನ್ನಲ್ಲಿ ಬರುವ ಭಕ್ತರಿಗೆ ಉತ್ತಮ ಸಂಸ್ಕಾರ ನೀಡಿದೆ ಎಂದು ತಿಳಿಸಿದರು.
ಆಶ್ರಮ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಇದರೊಂದಿಗೆ ವೃದ್ದಾಶ್ರಮ, ಆನಾಥಶ್ರಮ ಸ್ಥಾಪಿಸಿ ಅವರನ್ನು ತಾಯಿಯಂತೆ ರಕ್ಷಿಸುತ್ತಿದೆ. ಆಶ್ರಮ ಒಂದೇ ವಿಚಾರದ ಮೇಲೆ ಕೆಲಸ ಮಾಡದೆ ಸಮಾಜಕ್ಕೆ ಪೂರಕವಾದ ಅಂಶಗಳನ್ನು ಒಳಗೊಂಡಂತೆ ಕಾರ್ಯ ಮಾಡುತ್ತಿದೆ. ಆ ಮೂಲಕ ಎಲ್ಲಾ ಭಕ್ತರ ಮನ ಮುಟ್ಟುವಂತಹ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಣ್ಣಿಗೆ ಗೌರವ ಕೆಲಸವಾಗಬೇಕು. ಇಂತಹ ಸಂಸ್ಕಾರ ಪ್ರತಿ ಮನೆಗಳಿಂದ ಆರಂಭವಾಗಬೇಕು. ಮನೆಯಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡುವುದನ್ನು ಕಲಿಸಬೇಕು. ಅದರಂತೆ ಮಹಿಳೆಯರು ಸಹ ಪುರುಷರಿಗೆ ಗೌರವ ನೀಡಬೇಕು. ಅಂದಾಗ ಮಾತ್ರ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಬಹುದು ಎಂದು ಹೇಳಿದರು.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನದ ಡಾ.ನಿರ್ಮಾಲನಂದಾನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೂಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಉದ್ಯಮಿ ಬಿ.ಟಿ.ಸಿದ್ದೇಶ್, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಎನ್.ಓಂಕಾರ್, ಎ.ರೇಖಾ, ಮಂಜುನಾಥ್, ಬೆಂಗಳೂರಿನ ಬ್ರಾಹ್ಮಣ ಸಂಘದ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ನಿವೃತ್ತ ಪ್ರಚಾರ್ಯ ಡಾ.ವೈ.ರಾಜಾರಾಂ, ನಗರಸಭೆ ಸದಸ್ಯ ವೆಂಕಟೇಶ್ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss