Thursday, October 6, 2022

Latest Posts

ಕದ್ರಾ ನಿರಾಶ್ರಿತರ ಸಮಸ್ಯೆ ಪರಿಹಾರಕ್ಕೆ ರೂಪಾಲಿ ಮನವಿಗೆ ಇಂಧನ ಸಚಿವರ ಸಮ್ಮತಿ

ಹೊಸ ದಿಗಂತ ವರದಿ, ಕಾರವಾರ:

ಕದ್ರಾ ನಿರಾಶ್ರಿತರ ಬೇಡಿಕೆ ಈಡೇರಿಸುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯದ ಹಿನ್ನೆಲೆಯಲ್ಲಿ ಇಂಧನ ಸಚಿವ ಸುನೀಲಕುಮಾರ್ ಅಕ್ಟೋಬರ್ ಎರಡನೇ ವಾರದಲ್ಲಿ ಕಾರವಾರಕ್ಕೆ ಆಗಮಿಸಿ, ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಬೆಂಗಳೂರಿನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಸಚಿವರು ಹಾಗೂ ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಕದ್ರಾ ನಿರಾಶ್ರಿತರ ವಿಷಯ ಪ್ರಸ್ತಾಪಿಸಿ, ಕದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ನಿರಾಶ್ರಿತರಾಗಿ 35 ವರ್ಷಗಳಾದರೂ ಇದುವರೆಗೂ ಪುನರ್ವಸತಿ ಹಾಗೂ ಪರಿಹಾರ ನೀಡದೆ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿದರು.
ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ನೀಡಲಾದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ. ಕದ್ರಾ ಪುನರ್ವಸತಿ ಕೇಂದ್ರದಲ್ಲಿ ಮನೆಯನ್ನು ನೀಡಲಾಗಿದೆ. ಆದರೆ, ಇದವರೆಗೂ ವಾಸಿಸುತ್ತಿರುವ ಜಾಗ ನಿರಾಶ್ರಿತರ ಹಕ್ಕಿಗೆ ಒಳಪಟ್ಟಿಲ್ಲ. ಉದ್ಯೋಗದ ಭರವಸೆಯನ್ನು ನೀಡಿದರೂ ಈಡೇರಿಲ್ಲ. ಇಂತಹ ಹಲವಾರು ಸಮಸ್ಯೆಗಳನ್ನು ಕೆಪಿಸಿ ನಿರಾಶ್ರಿತರು ಅನುಭವಿಸುತ್ತಿದ್ದಾರೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಸ್ಪಂದಿಸಿದ ಸಚಿವರು ಅಕ್ಟೋಬರ್‌ ಎರಡನೇ ವಾರ ಉನ್ನತ ಅಧಿಕಾರಿಗಳೊಂದಿಗೆ ಕಾರವಾರಕ್ಕೆ ಆಗಮಿಸಿ ಸಭೆ ನಡೆಸಿ, ನಿರಾಶ್ರಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!