Monday, August 15, 2022

Latest Posts

ಕಲಬುರಗಿ| ಪೌರಕಾರ್ಮಿಕರಿಗೆ ಸನ್ಮಾನ, ಸರ್ವೇಕ್ಷಣ ಅಭಿಯಾನ ಕಾರ್ಯಕ್ರಮ

ಹೊಸ ದಿಗಂತ ವರದಿ, ಕಲಬುರಗಿ:

ಎಲ್ಲಿ ಸ್ವಚ್ಛತೆ ಇರುವುದು ಅಲ್ಲಿ ದೇವರು ನೆಲೆಸಿರುತ್ತಾನೆ. ದೇವರು ನೆಲೆಸೋಕೆ ಸ್ಥಳ ಕೊಡುವವರು ನಮ್ಮ ಪೌರ ಕಾರ್ಮಿಕರು.
ನೀವು ಮಾಡುವ ಸೇವೆ ಭಗವಂತ ಮೆಚ್ಚುವಂತಿರಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ
ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಸ್ವಚ್ಛ ಸರ್ವೇಕ್ಷಣದ ವಾರ್ಡ್ ನೋಡಲ್ ಅಧಿಕಾರಿ ದಯಾನಂದ
ಪಾಟೀಲ ಅವರು ಪೌರ ಕಾರ್ಮಿಕರಿಗೆ ಕರೆ ನೀಡಿದರು.
ಕಲಬುರಗಿ ನಗರದ ನೈರ್ಮಲೀಕರಣ ಹಾಗೂ ಶುಚಿತ್ವ ಸುಧಾರಣೆ ಮತ್ತು ಸ್ವಚ್ಛ ಸರ್ವೇಕ್ಷಣ ಅಭಿಯಾನ-2021 ಅಂಗವಾಗಿ ನಗರದ ಶಾಂತಿ ನಗರ ಉದ್ಯಾನವನದಲ್ಲಿ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ವಾರ್ಡ್ ಸಂಖ್ಯೆ 38, 39 ಮತ್ತು 40ರ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಸರ್ವೇಕ್ಷಣ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಸಿಲೂರು ಕಲಬುರಗಿಯಲ್ಲಿ ಇನ್ನೂ ಬಿಸಿಲು ಹೆಚ್ಚಾಗುವ ಸಮಯ ಆದರು ಸಹ ಪೌರ ಕಾರ್ಮಿಕರು ಬಿಸಿಲಿಗೆ ಹೆದರದೆ ತಮ್ಮ ಕಾರ್ಯಗಳು ಅಚ್ಚು-ಕಟ್ಟಾಗಿ ಮಾಡುತ್ತಿದ್ದಾರೆ. ಕಳೆದ ವರ್ಷ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಕಲಬುರಗಿ 312ನೇ ರ್ಯಾಂಕ್ ಪಡೆದುಕೊಂಡಿದ್ದು, ಈ ಬಾರಿ ಪ್ರಥಮ ಸ್ಥಾನ ಪಡೆಯುವಂತೆ ಮಾಡಬೇಕು ಎಂದು ಪೌರ ಕಾರ್ಮಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.
ಸರ್ವೇಕ್ಷನೆಯಲ್ಲಿ ಕಲಬುರಗಿ ಉತ್ತಮ ಸ್ಥಾನ ಗಳಿಸಲು ಪಾಲಿಕೆಯು ವಿಶೇಷ ತಂಡವೊಂದನ್ನು ರಚಿಸಿ ಅವರಿಗೆ ಮಾರ್ಗದರ್ಶನ ನೀಡಬೇಕು. ಮಾರ್ಗದರ್ಶನ ಪಡೆದವರು ನಗರದ ಪ್ರತಿ ಮನೆಗಳಿಗೆ ಹೋಗಿ ಸ್ವಚ್ಛತಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು. ಇನ್ನೂ ಆ್ಯಪ್ ಮೂಲಕ ನಗರದ ಜನತೆ ಮಹಾ ನಗರ ಪಾಲಿಕೆಯ ಕಾರ್ಯಗಳಿಗೆ ರೇಟಿಂಗ್ ನೀಡುವ ಮೂಲಕ ಪಾಲಿಕೆ ಜೊತೆ ಕೈ ಜೋಡಿಸಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು.
ಮಹಾನಗರ ಪಾಲಿಕೆಯ 38ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಬಿದ್ದಾಪೂರ, ಹೀರಾಪೂರ, ಹೈಕೋರ್ಟ್ ಒಳಗಡೆ ಪ್ರದೇಶ, ಜಾಧವ ಲೇಔಟ್, 39ನೇ ವಾರ್ಡ್‍ನಲ್ಲಿ ಬರುವ ಬಸವನಗರ ಅರ್ಧ ಭಾಗ, ಶಾಂತಿ ನಗರ, ವಿದ್ಯಾನಗರ, 40ನೇ ವಾರ್ಡ್‍ನಲ್ಲಿ ಬರುವ ಬೋರಾಬಾಯಿ ನಗರ, ಬಸವ ನಗರ, ಭಗತಸಿಂಗ ಚೌಕ, ಕೀರ್ತಿ ನಗರ, ಕೃಷ್ಣಾ ಕಾಲೋನಿಯ ಒಟ್ಟು 84 ಪೌರ ಕಾರ್ಮಿಕರಿಗೆ ಟೋಪಿ, ಕೋರ್ಟ್, ಮಾಸ್ಕ್, ಹ್ಯಾಂಡ್ ಗ್ಲೋಸ್‍ಗಳನ್ನು ನೀಡುವ ಮೂಲಕ ಕಾರ್ಮಿಕರಲ್ಲಿ ಉತ್ಸಾಹ ತುಂಬಿದರು. ಪೌರ ಕಾರ್ಮಿಕರ ಮೇಲ್ವಿಚಾರಕರಿಗೆ ಸಮವಸ್ತ್ರಗಳನ್ನು ಸಹ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಾಲಿಕೆಯ ಪರಿಸರ ಅಭಿಯಂತರರಾದ ಸುಷ್ಮಾ ಸಾಗರ, ಸಹಾಯಕ ಕಾರ್ಯಪಾಲಕ ಅಭಿಯಂತ ಮುನಾಫ್ ಪಟೇಲ, ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್, ಬಸವರಾಜ ತಂಬಾಕಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss