Thursday, July 7, 2022

Latest Posts

ಕಳತ್ಮಾಡು ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ

ಹೊಸ ದಿಗಂತ ವರದಿ, ಮಡಿಕೇರಿ:

ಕಳೆದ ಒಂದು ವರ್ಷದಿಂದ ಗಾಮೀಣ ಭಾಗಗಳಿಗೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೆ ಕಾರಣವಾಗಿದ್ದ ಪುಂಡಾನೆಯೊಂದನ್ನು ಕಳತ್ಮಾಡು ಗ್ರಾಮದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಆರು ಸಾಕಾನೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುವ ಮೂಲಕ ಸೆರೆ
ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಣಿಕೊಪ್ಪಲು ವ್ಯಾಪ್ತಿಯ ಕಳತ್ಮಾಡುವಿನಲ್ಲಿ ಸೆರೆಯಾಗಿರುವ 35ರ ಪ್ರಾಯದ ಗಂಡಾನೆಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ, ಬಲ್ಲೆ ಹಾಗೂ ಮತ್ತಿಗೋಡು ಆನೆ ಶಿಬಿರದ ಆರು ಸಾಕಾನೆಗಳ ಸಹಕಾರವನ್ನು ಪಡೆದುಕೊಂಡಿದ್ದರು. ಗ್ರಾಮಸ್ಥರು ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ನೆರವನ್ನು ಒದಗಿಸಿದ್ದು ವಿಶೇಷ.
ದಕ್ಷಿಣ ಕೊಡಗಿನ ಗೋಣಿಕೊಪ್ಪಲು ಬಳಿಯ ಕಳತ್ಮಾಡು ಹಾಗೂ ಅಮ್ಮತ್ತಿ ಗ್ರಾಮ ವ್ಯಾಪ್ತಿಯಲ್ಲಿ ಪುಂಡಾನೆಯ ಹಾವಳಿ ಮಿತಿ ಮೀರಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಕಾಡಾನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು.
ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 40 ಕ್ಕೂ ಅಧಿಕ ಸಿಬ್ಬಂದಿಗಳೊಂದಿಗೆ ಕಾಡಾನೆ ಸೆರೆ ಕಾರ್ಯಾಚರಣೆಗೆ ಇಳಿದಿತ್ತು. ಸಾಕಾನೆಗಳನ್ನು ಬಳಸಿಕೊಂಡ ಅರಣ್ಯ ಇಲಾಖಾ ತಂಡ, ಕಳತ್ಮಾಡು ಕಾಫಿ ತೋಟವೊಂದರಲ್ಲಿದ್ದ ಪುಂಡಾನೆಯನ್ನು ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪಶುವೈದ್ಯ ಡಾ.ಮುಜೀಬ್ ಮಾರ್ಗದರ್ಶನದಲ್ಲಿ ಹಾಗೂ ಮಡಿಕೇರಿ, ವೀರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ಕಾರ್ಯಾಚರಣೆ ನಡೆಸಲಾಗಿದ್ದು, ಮತ್ತಿಗೋಡು ಅನೆ ಶಿಬಿರದಿಂದ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ, ಹರ್ಷ, ಅಜಯ, ಧನಂಜಯ, ವಿಕ್ರಮ, ಸಾಕಾನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.
ಬಂಡೀಪುರ ಅರಣ್ಯಕ್ಕೆ ರವಾನೆ- ಸೆರೆ ಸಿಕ್ಕ ಕಾಡಾನೆಯನ್ನು ಕ್ರೈನ್ ಮೂಲಕ ಲಾರಿಗೆ ಹತ್ತಿಸಿ, ಅದನ್ನು ಬಂಡೀಪುರ ಅರಣ್ಯಕ್ಕೆ ರವಾನಿಸಲಾಗಿದೆಯೆಂದು ಮಾಹಿತಿ ದೊರಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss