ಹೊಸದಿಗಂತ ಆನ್ಲೈನ್ ನುಡಿನಮನ

“ಇಷ್ಟು ದಿನದ ಹೋರಾಟ ಸಾಕಾರವಾಯಿತು. ಇನ್ನು ಭವ್ಯ ರಾಮಮಂದಿರ ತಲೆಎತ್ತುವುದನ್ನು ನೋಡಿ ತುಂಬ ನಿಶ್ಚಿಂತೆಯಿಂದ ನಾನು ಪ್ರಾಣ ಬಿಡಬಹುದು.” ಅಯೋಧ್ಯೆಯ ತೀರ್ಪು ಬಂದಾಗ, ನಂತರ ಭೂಮಿ ಪೂಜನವಾದಾಗ ಇದೇ ಧಾಟಿಯಲ್ಲಿ ಮಾತನಾಡಿದ್ದರು ಕಲ್ಯಾಣ್ ಸಿಂಗ್. 89ನೇ ವಯಸ್ಸಿನಲ್ಲಿ ಇದೀಗ ಅವರು ಇಹಲೋಕಯಾತ್ರೆ ಮುಗಿಸಿರುವಾಗ, ಕೊನೆಪಕ್ಷ ಐನೂರು ವರ್ಷಗಳ ಸಂಘರ್ಷದಲ್ಲಿ ಹಿಂದುಗಳಿಗೆ ಜಯ ದೊರೆತ ಕ್ಷಣಕ್ಕೆ ಇವರು ಸಾಕ್ಷಿಯಾಗಿ ನಂತರ ತೆರಳುತ್ತಿದ್ದಾರಲ್ಲ ಎಂಬ ಸಮಾಧಾನವೊಂದಿದೆ.

ರಾಮಮಂದಿರದ ಸುದೀರ್ಘ ಹೋರಾಟದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಅವರದ್ದು ಚರಿತ್ರೆ ಪಕ್ಕಕ್ಕಿಡಲಾಗದ ಅಚಲ ಭೂಮಿಕೆ.

“ಕರಸೇವಕರ ಮೇಲೆ ಯಾವ ಕಾರಣಕ್ಕೂ ನಾನು ಗುಂಡು ಹಾರಿಸುವುದಕ್ಕೆ ಬಿಡಲಾರೆ, ಅಂಥ ಆದೇಶ ಕೊಡಲಾರೆ.”

“ಅಯೋಧ್ಯೆಯಲ್ಲಿ ಡಿಸೆಂಬರ್ ಆರರಂದು ಏನಾಯಿತು ಅದು ಲಕ್ಷಾಂತರ ಹಿಂದುಗಳ ಅಭಿವ್ಯಕ್ತಿಯಾಗಿತ್ತು. ಗುಮ್ಮಟ ಉರುಳಿಸುವುದಕ್ಕೆ ನಾನು ಸಂಚಿನಲ್ಲಿ ಭಾಗಿಯಾಗಿದ್ದೆ ಎಂಬುದನ್ನು ನಾನು ಒಪ್ಪಲಾರೆ. ಆದರೆ ಆ ಗುಮ್ಮಟ ಉರುಳಿದ್ದರ ಬಗ್ಗೆ ನನಗೆ ಯಾವ ದುಃಖ, ವಿಷಾದ, ಪಶ್ಚಾತ್ತಾಪಗಳೂ ಇಲ್ಲ.”

ಹಿಂದುಳಿದ ವರ್ಗದಿಂದ ನೇತಾರನಾಗಿ ರೂಪುಗೊಂಡ ಕಲ್ಯಾಣ್ ಸಿಂಗ್ ಹಿಂದುಗಳ ಹೃದಯ ಆಳಿದ್ದು ಇಂಥ ಖಡಕ್ ನಿಲುವುಗಳಿಂದ.

ವ್ಯಕ್ತಿಯೊಬ್ಬನ ಸೈದ್ಧಾಂತಿಕ ಬದ್ಧತೆ ಹಲವು ರೀತಿಯಲ್ಲಿ ಪರೀಕ್ಷೆಗೆ ಒಳಗಾಗುತ್ತದೆ. ಆ ಪೈಕಿ ಒಂದು ಸಂದರ್ಭ ಅಧಿಕಾರ ಸಿಗುವಂಥದ್ದು, ಇನ್ನೊಂದು ಅಧಿಕಾರದಿಂದ ದೂರ ಆಗುವಂಥದ್ದು. 

ಹೋರಾಟ ಮತ್ತು ಸಿದ್ಧಾಂತಗಳ ವಿಚಾರದಲ್ಲಿ ಅತ್ಯುಗ್ರವಾಗಿ ಮಾತನಾಡಿದವರು ನಂತರ ಅಧಿಕಾರ ಸಿಕ್ಕಾಗ ಅದನ್ನು ಉಳಿಸಿಕೊಳ್ಳುವುದಕ್ಕೆ ರಾಜಿಯಾಗಿರುವ ಸಂದರ್ಭಗಳು ಢಾಳಾಗಿ ಸಿಗುತ್ತವೆ. ಅವತ್ತಿನ ಒಂದಿಡೀ ಸೆಕ್ಯುಲರ್ ರಾಜಕಾರಣವು ಕರಸೇವಕರನ್ನು ಹತ್ತಿಕ್ಕುವುದಕ್ಕೆ ಎಲ್ಲ ಶಕ್ತಿಗಳನ್ನೂ ವ್ಯಯಿಸುತ್ತಿದ್ದಾಗ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ ಸಿಂಗ್ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ರಾಜಿಯಾಗಿಬಿಡಬಹುದಿತ್ತು. ಅವರು ಆ ಗಾದಿ ಏರಿದ್ದೇ ಜೂನ್ 1991ರಲ್ಲಿ. ತನ್ನ ಅವಧಿ ಮುಗಿಸಿಕೊಳ್ಳೋಣ, ನಂತರ ಬೇಕಾದರೆ ಆಂದೋಲನವಾಗಲಿ ಎಂದು ಯೋಚಿಸಬಹುದಿತ್ತು. ಅಯೋಧ್ಯೆಯಲ್ಲಿನ ವಿವಾದಾತ್ಮಕ ನಿರ್ಮಿತಿ ಉರುಳಿದ್ದೇ ಆದರೆ ತಮ್ಮ ಮುಖ್ಯಮಂತ್ರಿ ಪದವಿ ನಿಲ್ಲುವುದಿಲ್ಲ ಎನ್ನುವುದು ಅವರಿಗೇನೂ ಗೊತ್ತಿರದ ಸಂಗತಿಯಾಗಿರಲಿಲ್ಲ. 

ಆದರವತ್ತು ಕಲ್ಯಾಣ ಸಿಂಗ್ ರಾಮನಿಗಿಂತ ತಮ್ಮ ಪದವಿ ದೊಡ್ಡದಲ್ಲ ಅಂತ ನಿರ್ಧರಿಸಿದರು. ಕರಸೇವಕರ ಮೇಲೆ ಗುಂಡು ಹಾರಲಿಲ್ಲ. ವಿವಾದಿತ ನಿರ್ಮಿತಿ ಧರೆಗುರುಳಿತು. ಅಂತೆಯೇ ಕಲ್ಯಾಣ ಸಿಂಗ್ ಅವರ ಮುಖ್ಯಮಂತ್ರಿ ಪದವಿ ಸಹ. 

ಹೀಗೆ ಕಲ್ಯಾಣ ಸಿಂಗರು ಸೈದ್ಧಾಂತಿಕ ಸತ್ವಪರೀಕ್ಷೆಯಲ್ಲಿ ಚಿನ್ನದಂತೆ ಹೊಳೆದಿದ್ದು ಕೇವಲ ಅಧಿಕಾರದಲ್ಲಿ ಇದ್ದಾಗಲಷ್ಟೇ ಅಲ್ಲ, ನಂತರ ಅವರಿಂದದು ದೂರವಾದಾಗಲೂ. 

ಸಿದ್ಧಾಂತಗಳ ಬಗ್ಗೆ ಮಾತನಾಡುವ ವ್ಯಕ್ತಿ ಪಕ್ಷದಲ್ಲಿ ನಿರೀಕ್ಷಿತ ಸ್ಥಾನಮಾನ ಸಿಗದಿದ್ದಾಗ ತಾನು ಪ್ರತಿಪಾದಿಸಿದ ಸಿದ್ಧಾಂತಕ್ಕೇ ಘಾಸಿ ಮಾಡುವಂತೆ ಮಾತುಗಳನ್ನಾಡುವುದನ್ನು ನಾವು ಇತ್ತೀಚಿನ ನಿದರ್ಶನಗಳಲ್ಲಿ ನೋಡಿದ್ದೇವೆ. ಆದರೆ ಕಲ್ಯಾಣ ಸಿಂಗ್ ಅವರನ್ನು ಬಿಜೆಪಿ ಮತ್ತು ಅಧಿಕಾರವಲಯಗಳೆರಡೂ ದೂರವಾಗಿಸಿದಾಗಲೂ ಅವರು ಸಿದ್ಧಾಂತಕ್ಕೆ ವಿರುದ್ಧವಾಗಿ ನಂಜು ಕಾರಲಿಲ್ಲ. 

ಬಿಜೆಪಿಯನ್ನು ನಿಂದಿಸಿದರು ಖರೆ. ಮುಲಾಯಂ ಸಿಂಗ್ ಅಂಥವರೊಂದಿಗೆ ರಾಜಕೀಯವಾಗಿ ಕೈಜೋಡಿಸಿದರು ಖರೆ. ಆದರೆ ರಾಮ..? ಅವನ ಬಗ್ಗೆ ಮಾತ್ರ ಕಲ್ಯಾಣ ಸಿಂಗ್ ಅವರದ್ದು ಮುಕ್ಕಾಗದ ಭಕ್ತಿ. 

ಮುಲಾಯಂ ಸಿಂಗ್ ಪಾಳೆಯ ಸೇರಿಕೊಂಡಾಗಲೂ ಅವರು ‘ಸೆಕ್ಯುಲರ್’ ಸೋಗು ಹಾಕಲಿಕ್ಕೆ ಹೋಗಲಿಲ್ಲ.  ಸಮಾಜವಾದಿಗಳ ವೇದಿಕೆ ಮೇಲೆ ನಿಂತಾಗಲೂ ಅವರು ಯಾವುದೇ ವಿಷಾದ- ಹಿಂಜರಿಕೆಗಳನ್ನಿಟ್ಟುಕೊಳ್ಳದೇ ಹೇಳಿದರು- “ಡಿಸೆಂಬರ್ 6, 1992ರ ಬಾಬ್ರಿ ಮಸೀದಿ ಧ್ವಂಸಕ್ಕೆ ನನ್ನ ನೈತಿಕ ಹೊಣೆಗಾರಿಕೆ ಇದೆ. ಅದೇ ನೈತಿಕ ಜವಾಬ್ದಾರಿಯಿಂದಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದೇನೆ. ಆದರೆ ಪ್ರತಿಯೊಬ್ಬರಿಗೂ ಅವರ ಮತದ ಬಗ್ಗೆ ಹೆಮ್ಮೆಪಡುವ ಹಕ್ಕಿದೆ. ಒಬ್ಬ ಮುಸ್ಲಿಮನಿಗೆ ಹೇಗೋ ಹಾಗೆಯೇ ಹಿಂದುವಿಗೂ ತನ್ನ ಧರ್ಮದ ಬಗ್ಗೆ ಅಭಿಮಾನಪಡುವ ಅಧಿಕಾರವಿದೆ.”

ಲಿಬರಹಾನ್ ಆಯೋಗದ ಮುಂದೆ ನಿಂತ ಹಲವು ಧುರೀಣರು ಗುಮ್ಮಟ ಉರುಳಿದ್ದು ಆಗಬಾರದ ಘಟನೆಯಾಗಿತ್ತು ಎಂದೆಲ್ಲ ನಾಜೂಕು ಹೇಳಿಕೆ ನೀಡಿದರು. ಒಬ್ಬ ಕಲ್ಯಾಣ್ ಸಿಂಗ್ ಮಾತ್ರ ಆಯೋಗದ ಮುಂದೆ, ಟಿವಿ ಸಂದರ್ಶನಗಳಲ್ಲಿ, ವೇದಿಕೆಗಳಲ್ಲಿ ಎಲ್ಲೆಡೆ ಏಕಧ್ವನಿಯಿಂದ “ನನಗದರ ಬಗ್ಗೆ ಯಾವ ವಿಷಾದ, ಪಶ್ಚಾತಾಪಗಳೂ ಇಲ್ಲ” ಎಂದರಲ್ಲದೇ, “ಅಧಿಕಾರಿಗಳು ನನ್ನ ಆದೇಶದ ಮೇರೆಗೆ ಗುಂಡು ಹಾರಿಸಲಿಲ್ಲ. ಹೀಗಾಗಿ ಏನೇ ದೋಷಾರೋಪವಿದ್ದರೂ ನನ್ನ ಮೇಲೆ ಹೇಳಿ, ಅವರನ್ನು ಗುರಿಯಾಗಿಸಬೇಡಿ” ಎಂಬ ಗುಂಡಿಗೆ ಇರುವ ಮಾತುಗಳನ್ನಾಡಿದರು. 

 

ನಿಜ. ಕಲ್ಯಾಣ ಸಿಂಗ್ ಅವರು ತಾವು ಮುಖ್ಯಮಂತ್ರಿಯಾಗಿ ಯಾವುದೇ ಕಾರಣಕ್ಕೂ ವಿವಾದಾತ್ಮಕ ನಿರ್ಮಿತಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತೇನೆ ಅಂತ ಸುಪ್ರೀಂಕೋರ್ಟ್ ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಅವರು ಹಾಗೆ ಮಾಡದಿದ್ದರೆ ಅವತ್ತೇ ಅಧಿಕಾರ ಕಳೆದುಕೊಳ್ಳುತ್ತಿದ್ದರು. ಕರಸೇವೆ ಅಯೋಧ್ಯೆಯನ್ನು ತಲುಪುವುದೇ ಕಷ್ಟವಾಗುತ್ತಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಅವರ ತ್ಯಾಗ ಅರ್ಥ ಮಾಡಿಕೊಳ್ಳಬೇಕು. 

ಸುಪ್ರೀಂಕೋರ್ಟ್ ಅವರಿಗೆ ಒಂದು ದಿನದ ಜೈಲುವಾಸ ಮತ್ತು ಸಾವಿರ ರುಪಾಯಿಗಳ ದಂಡ ಹಾಕಿತು. 

ತನ್ನವರೇ ಕಾಡಿಗಟ್ಟಿದರೂ, ಏನೆಲ್ಲ ಅನ್ಯಾಯಗಳಾದರೂ ಶ್ರೀರಾಮಚಂದ್ರ ಆ ಕಾರಣಗಳನ್ನಿಟ್ಟುಕೊಂಡು ಮನಸ್ಸನ್ನು ಕಹಿ ಮಾಡಿಕೊಳ್ಳಲಿಲ್ಲ. ರಾಮಭಕ್ತ ಕಲ್ಯಾಣ ಸಿಂಗ್ ಸಹ ತನ್ನವರಿಂದಲೇ ಕಡೆಗಣನೆ ಅವಮಾನಗಳಿಗೆ ತುತ್ತಾದರೂ ಮೂಲಸಿದ್ಧಾಂತದ ಮೇಲೆ ಮನಸ್ಸು ಕಹಿ ಮಾಡಿಕೊಳ್ಳಲಿಲ್ಲ. ಆ ಬದ್ಧತೆಯನ್ನು ಕೊನೆತನಕ ಉಳಿಸಿಕೊಂಡರು. ಹಾಗೆಂದೇ ಅವರು ರಾಮಗೆ ತಕ್ಕ ಭಕ್ತ.

 

LEAVE A REPLY

Please enter your comment!
Please enter your name here