ವಾಣಿಜ್ಯನಗರಿಯೆಲ್ಲೆಡೆ ಕನ್ನಡದ ಕಂಪು: ರಾಜ್ಯೋತ್ಸವದಲ್ಲಿ ನೂರಾರು ಮಂದಿ ಭಾಗಿ

ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದಲ್ಲಿ ಎಲ್ಲೆಡೆ ಕನ್ನಡದ ಕಂಪು ಹರಡಿತು. ಕನ್ನಡಾಭಿಮಾನಿಗಳ ಉತ್ಸಾಹದ ಚಿಲುಮೆ ಸಾರ್ವಜನಿಕರಲ್ಲಿ ಹೊಸ ಚೈತನ್ಯ ಮೂಡಿಸಿತು. ಕನ್ನಡ‌ ರಾಜೋತ್ಸವ ಹಾಗೂ ಭುವನೇಶ್ವರಿಯ ಭಾವಚಿತ್ರ ಮೆರವಣೆಗೆಯಲ್ಲಿ‌ ನೂರಾರು ಜನರ ಕೈಯಲ್ಲಿ ಕನ್ನಡ ಬಾವುಟಗಳು ರಾರಾಜಿಸಿದವು.

ನಗರದ ಸಿದ್ಧಾರೂಢ ಮಠದ ಆವಣದಿಂದ ಆರಂಭವಾದ 67 ನೇ ಕರ್ನಾಟಕ ರಾಜೋತ್ಸವ ಹಾಗೂ ತಾಯಿ ಭವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಮೆರವಣೆಗೆಯಲ್ಲಿ ಡೊಳ್ಳು, ಹೆಜ್ಜೆ ಮಜಲು, ಕೋಲಾಟ, ಜಗ್ಗಲಗಿ ಹಾಗೂ ಗೊಂಬೆ ಕುಣಿತ ನೋಡುಗರನ್ನು‌ ಆಕರ್ಷಿಸಿದವು. ಶಾಲಾ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷನದಲ್ಲಿ ಗಮನ ಸೆಳೆದರು.

ಪುನೀತ್ ರಾಜಕುಮಾರ್, ಅಂಬೇಡ್ಕರ್, ರಾಜಕುಮಾರ ಅವರ‌ ಭಾವಚಿತ್ರಗಳಿದ್ದವು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಯಾರಿಸಿದ ರಥಗಳ ನೋಡಲು ಜನ ಮುಗಿಬಿದ್ದಿದ್ದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವಾ, ನಿತ್ಯೋತ್ಸವ ಗೀತೆಗಳಿಗೆ ಕನ್ನಡಭಿಮಾನಿಗಳು ಹೆಜ್ಜೆ ಹಾಕಿ ಸಂಭ್ರಮ ಸಡಗರದಿಂದ‌ ರಾಜೋತ್ಸವ ಆಚರಿಸಿದರು.

ಸಿದ್ಧಾರೂಢಮಠದಿಂದ‌ ಆರಂಭವಾದ ಮೆರವಣಿಗೆ ಹಳೇ ಹುಬ್ಬಳ್ಳಿ, ನ್ಯೂ ಇಂಗ್ಲಿಷ್ ಶಾಲೆ, ದುರ್ಗದಬೈಲ್, ಸ್ಟೇಷನ್ ರಸ್ತೆ ಮಾರ್ಗವಾಗಿ ಇಲ್ಲಿಯ ನೆಹರು ಮೈದಾನ‌ ತಲುಪಿ ಸಮಾಪ್ತಿಗೊಂಡಿತು.

ಇದಕ್ಕೂ ಮುಂಚೆ ಮೆರವಣಿಗೆ ಚಾಲನೆ‌ ನೀಡಿ‌ ಮಾತನಾಡಿದ ಮಾಜಿ‌ ಮುಖ್ಯ‌ಮಂತ್ರಿ‌ ಜಗದೀಶ ಶೆಟ್ಟರ, ಇಂಗ್ಲಿಷ್ ಕಲಿಯುವ ಮತ್ತು ಪ್ರೀತಿಸುವ ನಮಗೆ ಹಿಂದಿ ಬೇಡವಾಗಿದೆ. ರಾಷ್ಟ್ರದ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಕಲಿಯೋಣ. ರಾಜ್ಯಗಳ ಮೇಲೆ ಹಿಂದಿ ಹೇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವರೇ ಹೇಳಿದ್ದಾರೆ. ಹೀಗಾಗಿ, ಸರ್ಕಾರವನ್ನು ದೂರುವ ಕೆಲಸ ಮಾಡೋದು ಬೇಡ. ನಮ್ಮ ಭಾಷೆಯನ್ನು ಉಳಿಸುವ ಜೊತೆಗೆ ಇತರ ಭಾಷೆಗಳನ್ನು ಸಹ ಕಲಿಯೋಣ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಕನ್ನಡಿಗರು ಪಣ ತೊಡಬೇಕು. ಈ ಬಗ್ಗೆ ನಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡದಿದ್ದರೆ, ಕನ್ನಡ ಹೆಸರಿಗಷ್ಟೇ ಉಳಿಯುತ್ತದೆ ಎಂದರು.‌

ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ,ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ ಹಾಗೂ ಪಾಲಿಕೆ ಸದಸ್ಯರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!