190 ದೇಶಗಳಲ್ಲಿ ಕನ್ನಡ ಡಿಂಡಿಮ: ವಿದೇಶದಲ್ಲಿ ಅರಳಿದ ಕನ್ನಡ ಕುಡಿಗಳಿಗೆ ಕನ್ನಡ ಕಲಿಕೆ

ಹೊಸದಿಗಂತ ವರದಿ ಹಾವೇರಿ:

ಪ್ರಪಂಚದ 190 ದೇಶದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಕನ್ನಡ ನಾಡಿನಿಂದ ದೂರವಾಗಿ, ವಿದೇಶದಲ್ಲಿ ನೆಲೆಕಂಡು ಬುದುಕು ರೂಪಿಸಿಕೊಳ್ಳುತ್ತಿರುವ ಅನಿವಾಸಿ ಕನ್ನಡಿಗರು ಸಂಘಟನೆಗಳನ್ನು ಕಟ್ಟಿಕೊಂಡು ಮಕ್ಕಳಿಗೆ ಕನ್ನಡ ಭಾಷೆ ಕಲಿಸುತ್ತಿದಾರೆ. ಇವರ ಕನ್ನಡ ಪ್ರೀತಿ ನಾಡಿನ ಜನರಿಗೆ ತಿಳಿಯಲು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಾಯಿತು.

ಭಾನುವಾರದಂದು ಪಾಪು ಚಂಪಾ ವೇದಿಕೆಯ ‘ವಿದೇಶದಲ್ಲಿ ಕನ್ನಡ ಡಿಂಡಿಮ’ ಗೋಷ್ಠಿಯಲ್ಲಿ ವಿವಿಧ ದೇಶಗಳಿಂದ ಆಗಮಿಸಿದ ಅನಿವಾಸಿ ಕನ್ನಡರಿಗರು ತಮ್ಮ ಕನ್ನಡ ಪ್ರೀತಿಯನ್ನು ಅನಾವರಣಗೊಳಿಸಿದರು. ಜೊತೆಗೆ ಕೊಲ್ಲಿ ರಾಷ್ಟçಗಳ ಕನ್ನಡಿಗರ ದುಸ್ಥಿತಿ ಬಗ್ಗೆ ಗೋಷ್ಠಿ ಜನರ ಕಣ್ಣು ತೆರೆಸಿತು.‌

 

ಅನಿವಾಸಿ ಕನ್ನಡಿಗರಿಗಾಗಿ ಸಚಿವಾಲಯ, ಮಂತ್ರಿ ನೇಮಕ್ಕೆ ಮನವಿ:

ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ತೆರೆದು ಮಂತ್ರಿಗಳನ್ನು ನೇಮಕ ಮಾಡುವಂತೆ ದುಬೈ ಕನ್ನಡ ಸಂಘಟನೆಯ ಅಧ್ಯಕ್ಷ ಸರ್ವೊತ್ತಮ ಶೆಟ್ಟಿ ಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು ಅನಿವಾಸಿ ಭಾರತೀಯ ಕನ್ನಡಿಗರ ಸಮಿತಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ಇವರೊಂದಿಗೆ ಉಪಾಧ್ಯಕ್ಷರನ್ನು ಸರ್ಕಾರ ನೇಮಿಸಬೇಕು. ಇದರಿಂದಾಗಿ ಅನಿವಾಸಿ ಕನ್ನಡಿಗರಿಗೆ ತಮ್ಮ ಅಹವಲುಗಳನ್ನು ಸಲ್ಲಿಸಲು ಅವಕಾಶವಾಗುತ್ತದೆ. ಅನಿವಾಸಿ ಕನ್ನಡಿಗರಿಂದ ವಿಧಾನ ಪರಿಷತ್‌ಗೆ ಶಾಸಕರನ್ನು ಚುನಾಯಿಸಲು ಅವಕಾಶ ನೀಡಬೇಕು. ಸರ್ಕಾರ ವಿದೇಶದಿಂದ ಮರಳಿ ತಾಯ್ನಾಡಿಗೆ ಬರುವರಿಗೆ ಯೋಜನೆಗಳನ್ನು ಜಾರಿಗೊಳಸಬೇಕು. ಸ್ವಂತ ಉದ್ಯೋಗ ಅವಕಾಶಕ್ಕ ಸಹಾಯ, ಬಡ್ಡಿ ರಹಿತ ಸಾಲ, ಆರೋಗ್ಯ ಮಿಮೆಗಳನ್ನು ನೀಡಬೇಕು. ಅನಿವಾಸಿ ಕನ್ನಡಿಗರಿಗ ಸೇರಿದ ಆಸ್ತಿಗಳನ್ನು ಸರ್ಕಾರ ರಕ್ಷಿಸಬೇಕು ಎಂದರು.

ವಿದೇಶದಲ್ಲಿ ಬದುಕಟ್ಟಿಕೊಂಡವರಿಗೆ ಕನ್ನಡದ ಮೇಲೆ ಪ್ರೀತಿ ಹುಟ್ಟಿದ್ದು ಕನ್ನಡ ನಾಡು ಬಿಟ್ಟುಹೋದ ಮೇಲೆ. ವಿದೇಶದಲ್ಲಿ ಇರುವರು ಎಲ್ಲರೂ ಸ್ಥಿತಿವಂತರಲ್ಲ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸ ಕಳೆದು ಕೊಂಡು ರಾಜ್ಯ ಆಗಮಿಸುವ ಅವರಿಗೆ ಯಾವುದೇ ರೀತಿಯ ನೆರವು ದೊರಕುತ್ತಿಲ್ಲ. ಇವರು ರಾಜ್ಯದಲ್ಲಿ ಅಗತ್ಯವಿಲ್ಲದ ಭಾರತೀಯರಾಗಿದ್ದಾರೆ. ಇದು ನೋವಿನ ಸಂಗತಿಯಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಅರಬ್ ದೇಶಗಳಿಂದ ಆಗಮಿಸಿದ ಅನಿವಾಸಿ ಕನ್ನಡಿಗರನ್ನು ರಾಜ್ಯ ಸರ್ಕಾರ ನೆಡೆಸುಕೊಂಡ ರೀತಿ ಬಹಳ ಖೇಧಕರ ಎನಿಸುತ್ತದೆ. ಪಕ್ಕದ ಕೇರಳ ರಾಜ್ಯಕ್ಕೆ ಕೋವಿಡ್ ಸಂದರ್ಭದಲ್ಲಿ ಅನಿವಾಸಿ ಕೇರಳಿಗರನ್ನು ಕರೆತರಲು ಅರಬ್ ದೇಶಗಳಿಂದ 68 ವಿಮಾನಗಳು ನೀಡಲಾಯಿತು. ರಾಜ್ಯಕ್ಕೆ ಕೇವಲ 2 ವಿಮಾನಗಳ ಮೂಲಕ ಕನ್ನಡಿಗರನ್ನು ಕರೆತರಲಾಯಿತು. ಹಬ್ಬ, ರಜೆ ಸಂದರ್ಭದಗಳಲ್ಲಿ ದೇಶಕ್ಕೆ ಆಗಮಿಸುವ ವಿಮಾನ ದರವನ್ನು ದುಪ್ಪಟ್ಟುಗೊಳಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದರು.

ದುಬೈನ, ಸೌದಿ ಅರೇಬಿಯಾ ಹೊರತು ಪಡಿಸಿ ಮಧ್ಯ ಪ್ರಾಚ್ಯದ ಎಲ್ಲಾ  ರಾಷ್ಟçಗಳಲ್ಲಿಯೂ ಕನ್ನಡ ಸಂಘಟನೆಗಳು ಇವೆ. ಅಬುದಾಬಿ, ಶಾರ್ಜಾ, ಬೆಹರೇನ್, ಕುವೈತ್, ಕತಾರ್, ಒಮನ್ ಸಂಘಟನೆಗಳು ಸಕ್ರಿಯವಾಗಿ ಕನ್ನಡದ ಕೆಲಸಗಳನ್ನು ನಿರ್ವಹಿಸುತ್ತಿವೆ. ಬೆಹರೇನಲ್ಲಿ ಮೊಟ್ಟ ಮೊದಲ ಬಾರಿಗೆ 12 ಕೋಟಿ ವೆಚ್ಚದಲ್ಲಿ ಸ್ವಂತ ಜಾಗದಲ್ಲಿ ಕನ್ನಡ ಭವನ ನಿರ್ಮಿಸಲಾಗಿದೆ. ಮುಖ್ಯಮಂತ್ರಿಗಳು ಈ ಭವನ ಉದ್ಘಾಟಿಸಿಬೇಕು ಎನ್ನುವುದು ಅನಿವಾಸಿ ಕನ್ನಡಿಗರ ಆಸೆಯಾಗಿದೆ. ಅಮೇರಿಕಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಖಂಡಗಳಲ್ಲಿಯೂ ಕೂಡ ಕನ್ನಡ ಸಂಘಟನೆಗಳು ಕಾರ್ಯ ನಿರತವಾಗಿವೆ. ಮೆಲರ್ಬೊನ್ ಕನ್ನಡ ಸಂಘದ ಉದ್ಯಮಿಗಳು ಸರ್ಕಾರದ ನೆರವು ಇಲ್ಲದೆ ಸ್ವಂತ ಹಣದಲ್ಲಿ ಜಾಗ ಖರೀದಿಸಿ ಸಂಘ ಕಟ್ಟಿದ್ದಾರೆ. ಕುವತ್ ಕನ್ನಡ ಸಂಘ ಬೆಂಗಳೂರಿನ 8 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ. ಇಟಲಿ, ಥೈಲ್ಯಾಂಡ್, ನ್ಯೂಜಿಲ್ಯಾಂಡ್, ಹಾಂಕಾಗ್ ಹಾಗೂ ನ್ಯೂಯಾರ್ಕ ಕನ್ನಡ ಸಂಘಟನೆಗಳು ಕೆಲಸ ನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ನೀತಿ:

ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಘಟಕಗಳ ಸಮಿತಿ ಸದಸ್ಯೆ ಡಾ.ಆರತಿ ಕೃಷ್ಣ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, 50 ಲಕ್ಷ ಅನಿವಾಸಿ ಕನ್ನಡಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಇವರಿಗಾಗಿಯೇ ಸರ್ಕಾರ ಪ್ರತ್ಯೇಕ ನೀತಿಯನ್ನು ಜಾರಿಗೆ ತರಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಮನುಷ್ಯ ಭಾಂದವ್ಯಗಳನ್ನು ಬೆಳಸುವುದು ಭಾಷೆ. ವಿದೇಶದಲ್ಲಿ ಕನ್ನಡಿಗರು ತಮ್ಮ ಮಾತೃಭಾಷೆಯಿಂದಾಗಿ ಭಾನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಇಂದು ಕನ್ನಡ ವಿಶ್ವದ ಜ್ಞಾನ, ತಂತ್ರಜ್ಞಾನವನ್ನು ಅರಗಿಸಿಕೊಂಡು ಸಮೃದ್ಧಿಯಾಗಿ ಬೆಳೆಯುತ್ತಿದೆ. ವೈದ್ಯಕೀಯ, ಕಾನೂನು, ಅರ್ಥಶಾಸ್ತ್ರಗಳನ್ನು ಇಂದು ಕನ್ನಡದಲ್ಲಿ ಕಲಿಯಬಹುದು.

ಸರ್ಕಾರ ಎಲ್ಲಾ ವಿದೇಶಯರನ್ನು ಒಂದೇ ರೀತಿ ಕಾಣಬಾರದು. ಅಮೇರಿಕಾ ಹಾಗೂ ಯೂರೋಪ್ ದೇಶಗಳಲ್ಲಿ ನೆಲೆಸಿರು ಅನಿವಾಸಿಕ ಕನ್ನಡಿಗರಿಗಿಂತ ಮದ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಪರಿಸ್ಥಿತಿ ಭಿನ್ನವಾಗಿದೆ. ಹಾಗಾಗಿ ಇವರಿಗಾಗಿ ಪ್ರತ್ಯೇಕ ನೀತಿಗಳನ್ನು ಜಾರಿಗೊಳಿಸಬೇಕು ಎಂದರು.

ಗೋಷ್ಠಿಯಲ್ಲಿ ಮಾತನಾಡಿದ ಜರ್ಮನಿಯ ರವೀಂದ್ರ ಕುಲಕರ್ಣಿ ಹಾಗೂ ಲಂಡನ್‌ನ ಅಶ್ವಿನ್ ಶೇಷಾದ್ರಿ ಯುರೋಪ್ ದೇಶದ ಎಲ್ಲಾ ರಾಷ್ಟ್ರಗಳಲ್ಲೂ ಕನ್ನಡ ಸಂಘಟನೆಗಳು ಇವೆ. ಶನಿವಾರ ಹಾಗೂ ಭಾನುವಾರದಂದು ಮಕ್ಕಳಿಗೆ ವಿಶೇಷವಾಗಿ ಕನ್ನಡ ಭಾಷೆಯ ಶಿಕ್ಷಣ ನೀಡಲಾಗುತ್ತಿದೆ. 15 ದೇಶಗಳಲ್ಲಿ ನೆಲೆಸಿದ 4000 ಕನ್ನಡಿಗರ ಮಕ್ಕಳು ಇಂದು ಕನ್ನಡ ಕಲಿಯುತ್ತಿದ್ದಾರೆ. ಇದರೊಂದಿಗೆ ಸ್ಯಾನಿಷ್ ಹಾಗೂ ಪ್ರೆಂಚ್ ಭಾಷೆಯ ಆಸಕ್ತ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ಕೆಂಬ್ರಿಡ್ಜ್ ವಿ.ವಿ.ಯಲ್ಲಿ ಕನ್ನಡ ಸಂಘಟನೆ ತೆರೆಯಲಾಗಿದೆ. ಅಕ್ಕಾ (AKKA) ಮಾದರಿಯಲ್ಲಿ ನ್ಯೂಯಾರ್ಕನ ನವಿಕಾ(NAVIKA) ಯೋರೋಪಿನಲ್ಲಿ ಕನಸು(KANASU) ಸಂಘಟನೆಗಳು ಕಾರ್ಯು ನಿರ್ವಹಿಸುತ್ತಿವೆ ಎಂದರು.

ಅಮೇರಿಕಾದಿಂದ ರಾಜ್ಯ ಮರಳಿ ಕುಂದಾಪುರದಲ್ಲಿ ನೆಲಸಿರುವ ಫಿಜಿಯೋ ಥೆರಪಿಸ್ಟ್ ಜ್ಯೋತಿ ಮಹಾದೇವಿ ಅಮೇರಿಕಾದಲ್ಲಿಯೇ 150ಕ್ಕೂ ಹೆಚ್ಚು ಕನ್ನಡ ಲೇಖಕರು ಇದ್ದಾರೆ. ಇವರಲ್ಲಿ 60ಕ್ಕೂ ಹೆಚ್ಚು ಲೇಖರ ಕೃತಿಗಳು ಪ್ರಕಟವಾಗಿವೆ. ಈಗೆ ಯೂರೋಪ್, ಆಫ್ರಿಕಾ, ಆಸ್ಟ್ರೇಲಿಯಾಗಳಲ್ಲಿ ನೆಲಸಿ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿರುವರು ಇದ್ದಾರೆ. ಇವರನ್ನು ಸಾಹಿತ್ಯ ಪರಿಷತ್ತು ಗುರುತಿಸಿ, ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದರು.

ಸಂಶೋಧಕ ಎಸ್.ಎಲ್.ಶಿವಮೂರ್ತಿ ಮಾತನಾಡಿ ಸ್ವಾತಂತ್ರ ಪೂರ್ವದಲ್ಲಿ ಸರ್.ವಾಲ್ಟರ್ ವಿಲಿಯಟ್, ವಿಲಿಯಂ ಅಲೆನ್ ರಸೆಲ್, ಜಾನ್ ಫೇಟ್‌ಪುಲ್ ಫೀಟ್, ರೆವರೆಂಡ್ ಕಿಟಲ್, ಹರ್ಮನ್ ಮೋಗ್ಲಿನ್, ವಿಲಿಯಂ ಕ್ಯಾರಿ ಸೇರಿದಂತೆ ನೂರಾರು ವಿದೇಶಿಯರು ಕನ್ನಡ ಭಾಷೆ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!