ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕಾಸರಗೋಡು:
ಗಡಿನಾಡು ಕಾಸರಗೋಡಿನ ಕನ್ನಡದ ಕಟ್ಟಾಳು, ಸಾಹಿತ್ಯ , ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ವಲಯಗಳ ಮುಂದಾಳು, ಸಂಘಟಕ, ನಿವೃತ್ತ ಮುಖ್ಯ ಶಿಕ್ಷಕ ರಾಘವ ಬಲ್ಲಾಳ್ ಪೈವಳಿಕೆ (74) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಕನ್ನಡ ಭಾಷೆ , ಸಂಸ್ಕೃತಿಯ ಸಂಘಟನೆಯ ಮೂಲಕ ಕಾಸರಗೋಡು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ರಾಘವ ಬಲ್ಲಾಳ್ ಅವರು ಚಿಪ್ಪಾರು ಬಲ್ಲಾಳ್ ಮನೆತನದವರು. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಬಲ್ಲಾಳ್ ರ ಶ್ರಮವು ಸ್ತುತ್ಯರ್ಹವಾಗಿದೆ. ಪೈವಳಿಕೆಯಲ್ಲಿ ದಸರಾ ನಾಡಹಬ್ಬ ಉತ್ಸವ ಅಲ್ಲದೆ ಶಾಲಾ ಕಲೋತ್ಸವಗಳ ಪೂರ್ಣ ಯಶಸ್ಸಿಗೆ ಹಗಲಿರುಳೆನ್ನದೆ ದುಡಿದಿದ್ದರು. 1998-99ನೇ ಸಾಲಿನ ಕೇರಳ ರಾಜ್ಯ ಅಧ್ಯಾಪಕ ಪ್ರಶಸ್ತಿಗೆ ಭಾಜನರಾಗಿದ್ದ ಬಲ್ಲಾಳ್ ಅವರಿಗೆ ಜಿಲ್ಲೆ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕ ಗೌರವಾಭಿನಂದನೆಗಳು ಸಂದಿವೆ.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘವನ್ನು ಸತತ ಐದು ವರ್ಷಗಳ ಕಾಲ ಮುನ್ನಡೆಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ನ ಕೇರಳ ಗಡಿನಾಡ ಘಟಕದ ಗೌರವ ಕೋಶಾಧಿಕಾರಿ, ಕೇರಳ ಕನ್ನಡ ಪಠ್ಯಪುಸ್ತಕ ನಿರ್ಮಾಣ ಸಮಿತಿಯ ಸದಸ್ಯ , ನವೋದಯ ಕ್ಷೇಮಾಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಚಿಪ್ಪಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ , ಆಡಳಿತ ಸಮಿತಿಯ ಉಪಾಧ್ಯಕ್ಷ ಸಹಿತ ಅನೇಕ ಸಂಘಟನೆಗಳ ಪದಾಧಿಕಾರಿಯಾಗಿ ಸಮರ್ಥವಾಗಿ ಮುನ್ನಡೆಸಿದ್ದರು. ಮೃತರು ಪತ್ನಿ , ಪುತ್ರಿಯನ್ನು ಅಗಲಿದ್ದಾರೆ.