Saturday, December 9, 2023

Latest Posts

ರಾಜ್ಯದಲ್ಲಿ ಕನ್ನಡ ಕಡ್ಡಾಯ: ಕಾಯ್ದೆ ಜಾರಿಗೆ ಸರಕಾರ ರೆಡಿ ಎಂದ ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ಬರಲಿದ್ದು, ಈ ಸಂಬಂಧ ವಿಧೇಯಕವು ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಇದರಿಂದ ನಾಡು- ನುಡಿಗೆ ಕಾನೂನು ಬದ್ಧ ಸಂರಕ್ಷಣೆ ಸಿಗುವಂತಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಹೆಚ್.ಡಿ.ಕುಮಾರಸ್ವಾಮಿ ಅವರು, ಹಿಂದಿ ದಿವಸ್ ಹೆಸರಿನಲ್ಲಿ ಆ ಭಾಷೆಯನ್ನು ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದನ್ನು ಖಂಡಿಸಿ ಕನ್ನಡ ಪರ ನಿರ್ಣಯವನ್ನು ಸದನ ಅಂಗೀಕರಿಸುವಂತೆ ಆಗ್ರಹಿಸಿದರು. ಈ ಹಂತದಲ್ಲಿ ಸರ್ಕಾರದ ನಿಲುವು ಘೋಷಿಸಿದ ಸಿಎಂ ಬೊಮ್ಮಾಯಿ, ಕನ್ನಡ ಭಾಷೆ- ನೆಲ- ಜಲ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಪುನರುಚ್ಚರಿಸಿದರು.

ಕನ್ನಡ ರಕ್ಷಣೆಗೆ ಹಾಗೂ ಬೆಳೆಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಇದುವರೆಗೆ ಕನ್ನಡ ಭಾಷೆಗಾಗಿ ಪ್ರಾಧಿಕಾರ ಇತ್ತು. ಕನ್ನಡವೇ ಕಡ್ಡಾಯ ಎಂಬ ಮಾತುಗಳನ್ನು ಸಾಕಷ್ಟು ಕೇಳಿಯಾಗಿತ್ತು. ಈಗ ನಾವು ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲು ಕಾಯ್ದೆಯನ್ನು ತರುತ್ತಿದ್ದೇವೆ. ಕನ್ನಡಕ್ಕಾಗಿ ಕಾಯ್ದೆ ತರುತ್ತಿರುವುದು ಇದೇ ಮೊದಲು ಎಂದು ಹೇಳಿದರು.

ಮುಖ್ಯಮಂತ್ರಿಗಳ ಈ ಘೋಷಣೆಯನ್ನು ಇಡೀ ಸದನ ಪಕ್ಷಬೇಧ ಮರೆತು ಮೇಜು ತಟ್ಟುವ ಮೂಲಕ ಸ್ವಾಗತಿಸಿತು. ಪ್ರಸಕ್ತ ಅಧಿವೇಶನದಲ್ಲಿ ಸರ್ಕಾರ ತರಲಿರುವ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ವಿಧೇಯಕ- 2022 ರ ಕರಡು ಬಹುತೇಕ ಸಿದ್ಧವಾಗಿದೆ. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ನೇತೃತ್ವದಲ್ಲಿ ಈ ಕಾಯ್ದೆಗೆ ಅಂತಿಮ ರೂಪ ನೀಡಲಾಗಿದೆ. ಈ ಕಾಯ್ದೆ ಬಂದ ಮೇಲೆ ರಾಜ್ಯದ ಎಲ್ಲ ಅಂಗಗಳಲ್ಲಿಯೂ ಕನ್ನಡವೇ ಸಾರ್ವಭೌಮವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!