ಕನ್ನಡ ಸಾಹಿತ್ಯ ಸಮ್ಮೇಳನ: ಮೆರವಣಿಗೆಯಲ್ಲಿ ಚೆಂಡೆಮದ್ದಳೆ, ವೀರಗಾಸೆ, ಕಂಸಾಳೆ ಸಹಿತ 80ಕ್ಕೂ ಅಧಿಕ ಕಲಾತಂಡಗಳು!

ಹೊಸದಿಗಂತ ವರದಿ, ಹಾವೇರಿ:

ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ಮೆರಗು ಹಾಗೂ ಅದ್ಧೂರಿತನ ತರುವ ನಿಟ್ಟಿನಲ್ಲಿ ನಗರದಲ್ಲಿ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಚೆಂಡೆ ಮದ್ದಳೆ, ವೀರಗಾಸೆ, ಕಂಸಾಳೆ ಸೇರಿದಂತೆ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯ ಸೇರಿ ೮೦ಕ್ಕೂ ಅಧಿಕ ಜಾನಪದ ವೈವಿಧ್ಯಮಯ ಕಲಾ ತಂಡಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಮೆರವಣಿಗೆ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮೆರವಣಿಗೆ ಸಮಿತಿ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಬಸವರಾಜ ಶಿವಣ್ಣನವರ ತಿಳಿಸಿದರು.
ನಗರದ ಜಿಲ್ಲಾ ಗ್ರಂಥಾಲಯದಲ್ಲಿ ಶುಕ್ರವಾರ ಜರುಗಿದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಿಗ್ಗೆ ೮ ಗಂಟೆಗೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಿ, ಎಂ.ಜಿ.ರಸ್ತೆ, ಗಾಂಧಿವೃತ್ತ, ಮೈಲಾರ ಮಹದೇವಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗಿ ಸಮ್ಮೇಳನ ವೇದಿಕೆ ತಲುಪಲಿದೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಅಂದಾಜು ೨೫ ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಮೆರವಣಿಗೆಯಲ್ಲಿ ಪೊಲೀಸ್, ಎನ್.ಸಿ.ಸಿ., ಸ್ಕೌಟ್ಸ್ ಆಂಡ್ ಗೈಡ್ಸ್ ಜೊತೆಗೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಅಚ್ಚುಕಟ್ಟು ಮತ್ತು ಯಶಸ್ವಿಗೆ ಶ್ರಮಿಸೋಣ ಎಂದರು.
ಸಮಿತಿ ಅಧ್ಯಕ್ಷ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಮೆರವಣಿಗೆ ಸಮಿತಿಗೆ ೪೦ ಲಕ್ಷ ರೂಗೆ ಅನುಮೋದನೆ ನೀಡಲಾಗಿದೆ. ಅನುದಾನದ ಮಿತಿಯಲ್ಲಿ ಮೆರವಣಿಗೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮೆರವಣಿಗೆಯಲ್ಲಿ ಭುವನೇಶ್ವರಿ ಕನ್ನಡ ರಥ, ಸಮ್ಮೇಳನಾಧ್ಯಕ್ಷರ ಸಾರೋಟು ಸೇರಿದಂತೆ ೧೨ ಸಾರೋಟಗಳು, ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಸುಮಾರು ನಾಲ್ಕೈದು ಕಿ.ಮೀ.ಮೆರವಣಿಗೆ ಸಾಗುವುದರಿಂದ ಮೆರವಣಿಗೆಯಲ್ಲಿ ಸಾಗುವ ಕಲಾವಿದರಿಗೆ ಸಾರ್ವಜನಿಕರಿಗೆ ಆರು ಸ್ಥಳಗಳಲ್ಲಿ ನೀರು, ತಂಪು ಪಾನೀಯ, ಚಾಕಲೇಟ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ನಗರದ ಗೋಡೆಗಳಿಗೆ ವರ್ಲಿಕಲೆ ಚಿತ್ತಾರ, ಪೆಂಟಿಂಗ್ ಆರಂಭಿಸಲಾಗಿದೆ. ನಗರಸಭೆಯಿಂದ ೧.೫೦ ಕೋಟಿರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಆರಂಭಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ೩ ಕೋಟಿರೂ ವೆಚ್ಚದಲ್ಲಿ ತೋಟದಯಲ್ಲಾಪೂರದಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
೧೫ ಸಾವಿರ ಧ್ವಜ, ೧೦ ಸಾವಿರ ಶಲ್ಯ ಮಾಡಿಸಲಾಗುತ್ತಿದೆ. ಮಾಲಂಟಿಯರ‍್ಸ್‌ಗೆ ಬ್ಯಾಡ್ಜ್ ಹಾಗೂ ಐಡಿ ಕಾರ್ಡ್ ನೀಡಲಾಗುವುದು. ಮೆರವಣಿಗೆ ಸಾಗುವ ದಾರಿಯಲ್ಲಿ ತಳಿರುತೋರಣ, ರಂಗೋಲಿ ವ್ಯವಸ್ಥೆಗೆ ಕ್ರಮವಹಿಸಲು ಸಲಹೆ ನೀಡಲಾಯಿತು.
ಮೆರವಣಿಗೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳು ಭಾಗವಹಿಸುವಂತೆ ಆದೇಶ ಹೊರಡಿಸಲು ಪೊಲೀಸ್ ಇಲಾಖೆ, ಬಿಇಒ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!