ಕನ್ನಡ ಸಾಹಿತ್ಯ ಸಮ್ಮೇಳನ: ಮೆರವಣಿಗೆಗೆ ನಾಡಿನ ಸಾಂಸ್ಕೃತಿಕ ಪಂಪರೆಯನ್ನು ಬಿಂಬಿಸಲು ವೈವಿಧ್ಯಮಯ ಕಲಾ ತಂಡಗಳ ಆಯ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನವರಿ ೬ ರಿಂದ ೮ರವರೆಗೆ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗುವ ಮೊದಲ ದಿನದ ಮೆರವಣಿಗೆ ಹಾಗೂ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಿನ ಸಾಂಸ್ಕೃತಿಕ ಪಂಪರೆಯನ್ನು ಬಿಂಬಿಸಲು ವೈವಿಧ್ಯಮಯ ಕಲಾ ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಸಮ್ಮೇಳನದ ವಿವಿಧ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾವೇರಿಯಲ್ಲಿ ನಡೆಯುವ ಸಮ್ಮೇಳನ ಮುಂದಿನ ದಿನಗಳಲ್ಲಿ ಇತರ ಸಮ್ಮೇಳನಗಳಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ವೈವಿಧ್ಯಮಯ ಚರ್ಚೆಗಳು, ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಕಾರ್ಯಕ್ರಮವನ್ನು ನಿಗಧಿತ ಸಮಯದಲ್ಲಿ ನಡೆಸಲು ಕಾಲಪ್ರಜ್ಞೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆ ಕಾರ್ಯಕ್ರಮದ ಸಾಂಸ್ಕೃತಿಕ ತಂಡಗಳ ಆಯ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯಾಗಿದೆ. ತಾವು ಆಯ್ಕೆ ಮಾಡಿಕೊಟ್ಟ ಕಲಾತಂಡಗಳಿಗೆ ಅಗತ್ಯ ವ್ಯವಸ್ಥೆಯನ್ನು ಸದಸ್ಯ ಕಾರ್ಯದರ್ಶಿಗಳು ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ ೧೦ ಗಂಟೆಯೊಳಗಾಗಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಬೇಕು. ಈ ಹಿನ್ನಲೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳುವ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ರಾತ್ರಿ ೧೦ ಗಂಟೆಯೊಳಗಾಗಿ ಮುಕ್ತಾಯಗೊಳಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮ ಸಂಯೋಜಿಸಿ ಎಂದು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಿಗೆ ತಿಳಿಸಿದರು.
 ೬೦ ತಂಡ
ಮೆರವಣಿಗೆಯನ್ನು ಶ್ರೀಮಂತಗೊಳಿಸಲು ಹಾಗೂ ವೈವಿಧ್ಯತೆಯನ್ನು ತರಲು ಪ್ರತಿ ಜಿಲ್ಲೆಗೊಂದರಂತೆ ೩೦ ತಂಡಗಳು, ಹಾವೇರಿ ಜಿಲ್ಲೆಯ ಪ್ರತಿ ತಾಲೂಕಿಗೆ ಎರಡರಂತೆ ಹದಿನಾರು ತಂಡಗಳು ಹಾಗೂ ವಿಶೇಷ ತಂಡವಾಗಿ ೧೫ ತಂಡ ಸೇರಿದಂತೆ ೬೦ ತಂಡಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಮೆರವಣಿಗೆಯಲ್ಲಿ ಜಾನಪದ ವಿಶ್ವವಿದ್ಯಾಲಯ, ರಾಕ್ ಗಾರ್ಡ್‌ನ್, ಸರ್ವಜ್ಞ, ಶರೀಫ್‌ರು, ಕಾಗಿನೆಲೆ ಹಾಗೂ ವಿ.ಕೃ.ಗೋಕಾಕ ಟ್ರಸ್ಟ್‌ನಿಂದ ವಿಶೇಷ ಸ್ಥಬ್ದಚಿತ್ರಗಳನ್ನು ರೂಪಿಸಲು ಮನವಿ ಮಾಡಿಕೊಳ್ಳಲಾಯಿತು. ಛತ್ರ, ಚಾಮರದ ಜೊತೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಸಾರೋಟಗಳನ್ನು ಬಳಸಲು ತೀರ್ಮಾನಿಸಲಾಯಿತು. ಉಪ ಸಮಿತಿಯಲ್ಲಿ ಕೂಲಕುಂಷವಾಗಿ ಚರ್ಚಿ ಅಂತಿಮವಾಗಿ ತೀರ್ಮಾನಕೈಗೊಳ್ಳಲು ಸಲಹೆ ನೀಡಲಾಯಿತು.
ಚಿತ್ರಕಲಾ ಶಿಬಿರ, ಸಮ್ಮೇಳನಕ್ಕೆ ನಾಡಿನ ವಿವಿಧ ರಾಜ ಮನೆತಗಳ ಆಹ್ವಾನಿಸಲು ಪರಿಷತ್ತಿನ ಸದಸ್ಯರು ಸಲಹೆ ನೀಡಿದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ವಿವಿಧ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳು, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!