ಕಪಿಲ್ ದೇವ್ ಮಾನಸಿಕ ಆರೋಗ್ಯ ಪರಿಕಲ್ಪನೆಯನ್ನು ಗೇಲಿ ಮಾಡಿದ್ರಾ? ಒತ್ತಡ,ಖಿನ್ನತೆಗಳ ಬಗ್ಗೆ ಅವರ ವ್ಯಾಖ್ಯಾನ ನಿಮಗೇನನಿಸುತ್ತೆ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ಚಾಟ್ ವಿತ್ ಛಾಂಪಿಯನ್’ ಎಂಬ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಆಡಿರುವ ಮಾತುಗಳು ವೈರಲ್ ಆಗಿವೆ. ಬಹಳಷ್ಟು ಮಂದಿ ಅವರ ಮಾತುಗಳನ್ನು ಮೆಚ್ಚಿ ಚಪ್ಪಾಳೆ ತಟ್ಟಿ ನಕ್ಕಿದ್ದಾರೆ. ಆದರೆ, ಅಷ್ಟೇ ದೊಡ್ಡಮಟ್ಟದಲ್ಲಿ ಕಪಿಲ್ ದೇವರ ಮಾತುಗಳಿಗೆ ಅಸಮ್ಮತಿಯೂ ವ್ಯಕ್ತವಾಗಿದೆ.

ಇಷ್ಟಕ್ಕೂ ಕಪಿಲ್ ದೇವ್ ಹೇಳಿದ್ದೇನು ಎಂಬುದರ ಸಾರಸಂಗ್ರಹ ಗಮನಿಸುವುದಾದರೆ- “ಈ ದಿನಗಳಲ್ಲಿ ಒತ್ತಡ-ಡಿಪ್ರೆಶನ್ ಎಂಬ ಆಂಗ್ಲ ಮಾತುಗಳ ಬಳಕೆ ಹೆಚ್ಚಾಗ್ತಿದೆ. ಐ ಪಿ ಎಲ್ ಆಡ್ತಿದೇನೆ, ಒತ್ತಡ ಹೆಚ್ಚಾಗ್ತಿದೆ ಅಂತಾರೆ. ಕಷ್ಟವಾಗೋದಾದರೆ ಏಕೆ ಆಡ್ತೀರಿ? ನೀವು ಇಷ್ಟಪಟ್ಟು ಮಾಡುವುದರಲ್ಲಿ ಒತ್ತಡ ಎಂಬ ಪದ ಬರಬಾರದು. ಪ್ಯಾಶನ್ ಇರುವ ಕಡೆ ಪ್ರೆಶರ್ ಬರೋದು ಹೇಗೆ ಸಾಧ್ಯ? ಇನ್ನು ಈಗಿನ ಶಾಲಾ ಮಕ್ಕಳೂ ಅಯ್ಯೋ ಒತ್ತಡದಲ್ಲಿದ್ದೇವೆ ಎನ್ನುತ್ತಿವೆ. ಮೊದಲಿನಂತೆ ಯಾವ ಶಿಕ್ಷಕರೂ ಮಕ್ಕಳನ್ನು ಹೊಡೆಯುವಂತಿಲ್ಲ, ನಿಮ್ಮ ಪಾಲಕರು ಹೆಣಗಾಡಿ ಫೀಸು ಕೊಟ್ಟು, ಎಲ್ಲ ಸವಲತ್ತುಗಳೊಂದಿಗೆ ನಿಮಗೆ ಶಾಲೆ ಸೇರಿಸುತ್ತಾರೆ. ನಮಗೆಲ್ಲ ಮೇಷ್ಟ್ರು ಮೊದಲು ಹೊಡೆದು ನಂತರ ಪ್ರಶ್ನೆ ಕೇಳುತ್ತಿದ್ದರು.ಹೀಗಿರುವಾಗ ನಿಮಗ್ಯಾವ ಸೀಮೆ ಒತ್ತಡ?”

 

ಇದಕ್ಕೆ ಆಕ್ಷೇಪ ಕೊಟ್ಟು ಅನೇಕರು ಟ್ವೀಟ್ ಮಾಡಿದ್ದಾರೆ. ಅವರೆಲ್ಲರ ವಾದ ಹೀಗಿದೆ- ಕಪಿಲ್ ದೇವ್ ಅವರೇ…ನಿಮ್ಮ ಕಾಲ ಬೇರೆ, ಈಗಿನ ವಾಸ್ತವಗಳು ಬೇರೆ. ಒತ್ತಡ, ಖಿನ್ನತೆ ಇವೆಲ್ಲ ಮಾನಸಿಕ ಆರೋಗ್ಯದ ಇವತ್ತಿನ ವಾಸ್ತವಗಳು. ನೀವು ಮಾತಿನ ಭರದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಹೊರಹಾಕುವುದೇ ತಪ್ಪು ಎಂಬಂತೆ ಗೇಲಿ ಮಾಡಿದ್ದೀರಿ ಅನ್ನೋದು.

ನಿಜ..ಪ್ಯಾಶನ್ ಇಟ್ಟುಕೊಂಡೂ ಮಾಡುವ ಕೆಲಸದಲ್ಲಿ ಒತ್ತಡಗಳು ಎದುರಾಗಬಾರದು ಎಂದೇನಲ್ಲ. ಮತ್ತೊಂದೆಡೆ, ಕಪಿಲ್ ದೇವ್ ಅವರೇನೂ ಮಕ್ಕಳಿಗೆ ಹೊಡೆಯುವುದು ಸರಿ ಎಂದಿಲ್ಲ. ಆದರೆ ಶಾಲಾಮಕ್ಕಳ ಹಂತದಲ್ಲೇ ವೃಥಾ ಒತ್ತಡ ಇತ್ಯಾದಿಗಳನ್ನು ದೊಡ್ಡದಾಗಿ ಬಿಂಬಿಸುವ ಬಗ್ಗೆ ಅವರ ಆಕ್ಷೇಪವಿದ್ದಂತಿದೆ. 

ಒತ್ತಡ, ಖಿನ್ನತೆ ಇವೆಲ್ಲವೂ ಇವತ್ತಿನ ವಾಸ್ತವಗಳಂತೂ ಹೌದು. ಆದರೆ ಈಗಿನವರು ಅವುಗಳನ್ನು ಅಗತ್ಯಕ್ಕಿಂತ ಹೆಚ್ಚು ಉಲ್ಲೇಖಿಸುತ್ತ ತಮ್ಮನ್ನು ಬಲಿಪಶುಗಳಂತೆ ಬಿಂಬಿಸಿಕೊಳ್ಳುವುದರಲ್ಲಿ ಸಂತೋಷ ಹುಡುಕುತ್ತಿದ್ದಾರಾ?

ಕಪಿಲ್ ದೇವ್ ವ್ಯಾಖ್ಯಾನದ ಬಗ್ಗೆ ನಿಮಗೇನನಿಸುತ್ತದೆ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!