Friday, July 1, 2022

Latest Posts

ಏ.16ರಂದು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವರ ವಾರ್ಷಿಕ ವಿಷು ಜಾತ್ರೆಯ ರಥೋತ್ಸವ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಂಟ್ವಾಳ ತಾಲೂಕು ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 25 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ನೂತನ ಬ್ರಹ್ಮರಥದಲ್ಲಿ ಶ್ರೀ ದೇವರ ವಾರ್ಷಿಕ ವಿಷು ಜಾತ್ರೆಯ ರಥೋತ್ಸವ ಏ.16ರಂದು ಶುಕ್ರವಾರ ನಡೆಯಲಿದೆ. ಅಪರಾಹ್ನ
12ಕ್ಕೆ ಮಹಾಪೂಜೆಯ ಬಳಿಕ ದೇವರ ರಥಾರೋಹಣ, ಅನ್ನಸಂತರ್ಪಣೆ, ರಾತ್ರಿ 7.30ರಿಂದ ರಥೋತ್ಸವ, ಭೂತಬಲಿ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.
ನೂತನ ಬ್ರಹ್ಮರಥವನ್ನು ದೇವಸ್ಥಾನಕ್ಕೆ ಹಸ್ತಾಂತರಿಸುವ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಕುರ್ನಾಡುಗುತ್ತು ಸುದರ್ಶನ ಶೆಟ್ಟಿ, ಕ್ಷೇತ್ರದ ತಂತ್ರಿಗಳಾದ ರಘುರಾಮ ತಂತ್ರಿ, ಅರ್ಚಕ ಹರಿ ಭಟ್, ರಾಘವೇಂದ್ರ ರಾವ್, ಸ್ಥಳೀಯ ಪ್ರಮುಖರಾದ ಟಿ.ಜಿ.ರಾಜಾರಾಮ ಭಟ್, ಕಟ್ಟೆಮಾರ್ ನಾಗರಾಜ ಭಟ್, ಕೊಡಕ್ಕಲ್ಲು ರಾಮಕೃಷ್ಣ ಭಟ್, ಕಾಡೆಮಾರ್ ಶಿವಶಂಕರ ಭಟ್, ಶ್ರೀಕರ ಶೆಟ್ಟಿ ಮಾಗಂದಾಡಿ, ಗುಣಕರ ಆಳ್ವ ಯಾನೆ ರಾಮ ರೈ, ಪ್ರಶಾಂತ ಕಾಜವ, ಶರತ್ ಕಾಜವ, ಹರಿಪ್ರಸಾದ್ ರೈ ಕೊದಂಟಿ, ಕುರ್ನಾಡು ಗ್ರಾ.ಪಂ. ಅಧ್ಯಕ್ಷ ಗಣೇಶ್ ನಾಯ್ಕ್, ಸೋಮನಾಥ ನಾಯ್ಕ್, ಜಯರಾಮ ಸಾಂತ, ಕಟ್ಟೆಮಾರು ಪೆದಮಲೆ ಗೋಪಾಲ ನಾಯ್ಕ್ ಮತ್ತು ಪರಿವಾರದವರು, ದೇವಸ್ಥಾನದ ಸಿಬ್ಬಂದಿ ಹಾಜರಿದ್ದರು.
ನೂತನ ಬ್ರಹ್ಮರಥವನ್ನು ಸುಮಾರು 25 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಏಳು ತಿಂಗಳುಗಳಲ್ಲಿ ರಥ ನಿರ್ಮಾಣ ಪೂರ್ಣಗೊಂಡಿದೆ. ರಮೇಶ ಕಾರಂತ ಬೆದ್ರಡ್ಕ ನೂತನ ರಥದ ವಾಸ್ತುಶಿಲ್ಪಿಯಾಗಿದ್ದು, ಕಾಷ್ಠಶಿಲ್ಪಿ ಹರೀಶ ಆಚಾರ್ಯ ಬೋಳ್ಯಾರು ಹಾಗೂ ತಂಡದವರು ರಥ ನಿರ್ಮಿಸಿದ್ದಾರೆ. ಸುಮಾರು 24 ಫೀಟ್ ಎತ್ತರದ ರಥ ನಿರ್ಮಾಣಕ್ಕೆ ಸಾಗುವಾನಿ ಮರ ಬಳಸಲಾಗಿದೆ. ಈ ಹಿಂದಿನ ರಥಕ್ಕೆ ಒಂದು ಶತಮಾನಕ್ಕೂ ಅಧಿಕ ಇತಿಹಾಸವಿದ್ದು, ರಥ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಬ್ರಹ್ಮಕಲಶೋತ್ಸವದ ಬಳಿಕ ಇದೀಗ ನೂತನ ರಥ ನಿರ್ಮಿಸಲಾಗಿದೆ ಎಂದು ಕುರ್ನಾಡು ಗ್ರಾ.ಪಂ. ಅಧ್ಯಕ್ಷ ಗಣೇಶ ನಾಯ್ಕ್ ತಿಳಿಸಿದ್ದಾರೆ.
ನೂತನ ರಥದಲ್ಲಿ ಹೊಯ್ಸಳ ಶೈಲಿಯ ಕೆತ್ತನೆಗಳಿದ್ದು, ಶಿವ ಪರಿವಾರ, ಸ್ಥಳೀಯ ದೈವ ದೇವರುಗಳ ಪ್ರತಿಮೆಗಳ ಕೆತ್ತನೆಗಳನ್ನು ಅಳವಡಿಸಲಾಗಿದೆ. ದಕ್ಷ ಬ್ರಹ್ಮ, ಈಶ್ವರ, ನಂದಿ ಮತ್ತಿತರ ಪ್ರತಿಮೆಗಳು ಶಿವಪರಿವಾರವನ್ನು ಸಾಂಕೇತಿಸುತ್ತವೆ ಎಂದು ರಥದ ನಿರ್ಮಾತೃ ಹರೀಶ ಆಚಾರ್ಯ ಮಾಹಿತಿ ನೀಡಿದ್ದಾರೆ. ನೂತನ ರಥಕ್ಕೆ ಕಲಶ ಅಳವಡಿಕೆ ಗುರುವಾರ ಮುಂಜಾನೆ ಹಾಗೂ ವಾಸ್ತುಹೋಮ ರಥೋತ್ಸವದ ಮುನ್ನಾದಿನ ಗುರುವಾರ ಸಂಜೆ ನೆರವೇರಿತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss