ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಕೇಂದ್ರಗಳಲ್ಲಿ ಬಿಗಿ ಭದ್ರತೆ, ಹಿಜಾಬ್‌ಗೆ ನೋ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಮೊದಲಿಗೆ ʻಆಲ್‌ ದಿ ಬೆಸ್ಟ್‌ʼ. ಯಾವುದೇ ಭಯವಿಲ್ಲದೆ, ಗೊಂದಲವಿಲ್ಲದೆ ನಿಮ್ಮ ಪರೀಕ್ಷಯನ್ನು ಪೂರ್ಣಗೊಳಿಸಿ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಎಲ್ಲ ವಿಷಯಗಳಲ್ಲೂ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಲಾಗಿದೆ. ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು, ಒಟ್ಟಾರೆ ಈ ಬಾರಿ 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 5,716 ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.

ಹಿಜಾಬ್‌ಗೆ ನೋ ಎಂಟ್ರಿ

ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆ ಬರೆಯಲು ಪ್ರವೇಶವಿಲ್ಲ ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿನ್ನೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹಿಂದಿನ ವರ್ಷದ ನಿಯಮವೇ ಈ ವರ್ಷವೂ ಮುಂದುವರಿಯಲಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಬಂದಲ್ಲಿ ಪರೀಕ್ಷೆಗೆ ಅನುಮತಿಯಿಲ್ಲ.

ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ

ವಿದ್ಯಾರ್ಥಿಗಳು ಯಾವುದೇ ಕಿರಿಕಿರಿಯಿಲ್ಲದೆ ಪರೀಕ್ಷೆ ಬರೆಯಲು ಸಕಲ ವ್ಯವಸ್ಥೆ ಮಾಡಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರಗಳ ಸುತ್ತ ಸುಮಾರು 200 ಮೀಟರ್‌ ವ್ಯಾಪ್ತಿವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಜೊತೆಗೆ 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತದಳ, 525 ತಾಲೂಕು ಜಾಗೃತ ದಳ ಹಾಗೂ 2373 ವಿಶೇಷ ಜಾಗೃತದಳ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಹಾಗೆಯೇ ಪೊಲೀಸ್‌ ಭದ್ರತೆ, ಸಿಸಿ ಕ್ಯಾಮೆರಾ ಕಣ್ಗಾವಲು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳು ಬಂದ್, ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್‌, ಸ್ಮಾರ್ಟ್‌ಫೋನ್‌, ಬ್ಲೂಟೂತ್‌ ನಿಷೇಧಿಸಲಾಗಿದೆ.

ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಹಾಲ್‌ ಟಿಕೆಟ್‌ ತೋರಿಸಿದರೆ ಸಾಕು ಬೇರ್ಯಾವುದೇ ಪಾಸ್‌, ಟಿಕೆಟ್‌ ಅಗತ್ಯವಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಎರಡರಲ್ಲೂ ಪರೀಕ್ಷೆ ಮುಗಿಯುವವರೆಗೂ ಉಚಿತ ಪ್ರಯಾಣ ಸಿಗಲಿದೆ.

ಇನ್ನೂ ಮೇ ಮೊದಲ ವಾರದಲ್ಲಿ ‘ದ್ವಿತೀಯ ಪಿಯುಸಿ’ ಪರೀಕ್ಷೆ ಫಲಿತಾಂಶ ಹೊರಬೀಳಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!