Tuesday, August 16, 2022

Latest Posts

ಸದನದಲ್ಲಿ ಸದ್ದು ಮಾಡಿದ ಶಬ್ದ ‘ಬಯೊರೆಮಿಡಿ’ – ಇದು ದುರ್ವಾಸನೆಯ ಕಸದ ಗುಡ್ಡವನ್ನು ಇಲ್ಲವಾಗಿಸುವ ಮಂತ್ರ!

ಹೊಸದಿಗಂತ ಆನ್ಲೈನ್ ಡೆಸ್ಕ್

“ನಿಜ, ನೀವು ಹೇಳೋದು ಒಪ್ತೇನೆ” ಈ ಮಾತು ಆಡಳಿತ ಮತ್ತು ವಿಪಕ್ಷಗಳು ಸದನದಲ್ಲಿ ಚರ್ಚೆಯಲ್ಲಿರುವಾಗ ಕೇಳಿಬರುವುದು ಅಪರೂಪ. ಆದರೆ, ಮಂಗಳವಾರ ಸದನದಲ್ಲಿ ಕಾಂಗ್ರೆಸ್ಸಿನ ಕೆ ಜೆ ಜಾರ್ಜ್ ಅವರು ಕೊಳಚೆ ನೀರು ಹಾಗೂ ಘನತ್ಯಾಜ್ಯಗಳ ವಿಲೇವಾರಿ ಬಗ್ಗೆ ಮಾತನಾಡುತ್ತ, ಹೊಸ ಶುದ್ಧೀಕರಣ ಘಟಕಗಳನ್ನು ಆದ್ಯತೆ ಮೇರೆಗೆ ಕಾರ್ಯಾರಂಭಿಸುವುದಲ್ಲದೇ “ಬಯೊರೆಮಿಡಿ” ಕಡೆಗೂ ಗಮನ ಹರಿಸಬೇಕು ಎಂದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಬಯೊರೆಮಿಡಿ ಹೊಸ ವಿಧಾನ. ಈ ಸಾಧ್ಯತೆಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದಕ್ಕೆ ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದರು.

ಏನಿದು ಬಯೊರೆಮಿಡಿ ಅಥವಾ ಬಯೊರೆಮಿಡಿಶನ್? ಘನತ್ಯಾಜ್ಯಕ್ಕೆ ಜೈವಿಕ ಪರಿಹೋರಾಪಾಯ ನೀಡುವ ಮಾದರಿ ಎಲ್ಲಾದರೂ ಯಶಸ್ವಿಯಾಗಿದೆಯೇ?

ಇಂದೋರ್ ಮಾದರಿಯಲ್ಲಿ ಕಂಡ ಜೈವಿಕ ಪರಿಹಾರೋಪಾಯ

ಈಗೆರಡು ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ನಗರ ತನ್ನಲ್ಲಿ ಬಹಳ ವರ್ಷಗಳಿಂದ ಸಂಗ್ರಹವಾಗಿದ್ದ ಬರೋಬ್ಬರಿ 15 ಲಕ್ಷ ಮೆಟ್ರಿಕ್ ಟನ್ ಘನತ್ಯಾಜ್ಯದ ಬೆಟ್ಟವನ್ನು ಯಶಸ್ವಿಯಾಗಿ ಕರಗಿಸಿತು. ಇದಕ್ಕೆ ಮೂರು ವರ್ಷಗಳು ತಗುಲಿದವು. ಇದಕ್ಕೆ ತಗುಲಿದ ವೆಚ್ಚ ರು 10 ಕೋಟಿ.

ಈ ಜೈವಿಕ ಪರಿಹಾರದಲ್ಲಿ ಎರಡು ಹಂತಗಳಿರುತ್ತವೆ. ಒಂದು, ತ್ಯಾಜ್ಯವನ್ನು ಹುಡಿಯಾಗಿಸುವ ಸೂಕ್ಷ್ಮಜೀವಿಗಳನ್ನು ಏಕತ್ರವಾಗಿರುವ ಕಸದ ರಾಶಿಗೆ ಬಿಡಲಾಗುತ್ತದೆ. ಅವು ಘನತ್ಯಾಜ್ಯವನ್ನು ಮತ್ತಷ್ಟು ವಿಘಟಿಸುತ್ತವೆ.

ಎರಡನೇ ಹಂತದಲ್ಲಿ ಯಂತ್ರಗಳನ್ನು ಉಪಯೋಗಿಸಿ ಈ ಇಡೀ ಕಸದ ಗುಡ್ಡೆಯಲ್ಲಿರುವ ಮಣ್ಣಿನಂಶವನ್ನು, ಸೂಕ್ಷ್ಮಜೀವಿಗಳ ಪಚನದ ನಂತರವೂ ಉಳಿದುಕೊಂಡಿರುವ ಪದಾರ್ಥಗಳಿಂದ ಬೇರ್ಪಡಿಸಲಾಗುತ್ತದೆ. ಇಲ್ಲಿ ದೊರೆಯುವ ಅಗಾಧ ಪ್ರಮಾಣದ ಮಣ್ಣನ್ನು ಖಾಲಿಬಿಟ್ಟ ಜಾಗಗಳಲ್ಲಿ ಹಾಕಲಾಗುತ್ತದೆ. ಅದು ವಿಷಮುಕ್ತವಾಗಿರುವುದರಿಂದ ಯಾವುದೇ ಅಪಾಯವಿಲ್ಲ. ಹೀಗೆ ಹಾಕಿದ ಮಣ್ಣಿನ ಮೇಲೆ ಕ್ರಮೇಣ ಹಸಿರುಹಾಸು ಬೆಳೆದುಕೊಳ್ಳುತ್ತದೆ. ಇಲ್ಲಿ ಕೆಲವು ವರ್ಷಗಳ ನಂತರ ಉದ್ಯಾನವನ ಇಲ್ಲವೇ ಕಿರು ಅರಣ್ಯವನ್ನು ಬೆಳೆಸಬಹುದು ಎನ್ನುವುದು ಪರಿಣತರ ಲೆಕ್ಕಾಚಾರ. ಇದನ್ನು ಬಯೊಮೈನಿಂಗ್ ಅಂತಲೂ ಹೇಳಲಾಗುತ್ತದೆ. ಇಂದೋರ್ ಉದಾಹರಣೆಯನ್ನು ಬೇರೆಡೆ ಪಾಲಿಕೆಗಳೂ ಅನುಸರಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸಹ ಹೇಳಿದೆ. 

ಪ್ರಯೋಗಕ್ಕೆ ಸಿದ್ಧವಾಗಿದೆ ಮೈಸೂರು

ಮೈಸೂರಿನ ವಿದ್ಯಾರಣ್ಯಪುರದಲ್ಲಿ ಬಹಳಷ್ಟು ವರ್ಷಗಳಿಂದ ಸುಮಾರು 3 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಘನತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ಇಂದೋರ್ ಮಾದರಿಯಲ್ಲೇ ಬಯೊರೆಮಿಡಿ-ಬಯೊಮೈನಿಂಗ್ ಮೂಲಕ ಸಂಸ್ಕರಿಸಬೇಕು ಎಂದು ತಯಾರಿಸಲಾಗಿದ್ದ ವಿಸ್ತೃತ ಯೋಜನಾ ವರದಿಗೆ ಕೆಲವಾರಗಳ ಹಿಂದೆ ರಾಜ್ಯ ಸರ್ಕಾರದ ಸಂಪುಟದ ಅನುಮೋದನೆ ದೊರೆತಿದೆ. ಈ ಬಗ್ಗೆ ಹಿಂದೆಯೇ ಅನುಮೋದನೆ ದೊರೆತಿತ್ತಾದರೂ ಯೋಜನೆಯನ್ನು ಮೂರು ಸರ್ಕಾರಿ ವಿಭಾಗಗಳಲ್ಲಿ ಹಂಚಲಾಗಿತ್ತು. ಇದರಿಂದ ಆಗುವ ಸಮನ್ವಯದ ಕೊರತೆಯನ್ನು ಮನಗಂಡು ಈಗ ಹೊಸ ಯೋಜನೆಗೆ ಅನುಮತಿ ದೊರೆತಿದೆ. 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss