ಹೊಸದಿಗಂತ ವರದಿ, ನಾಗಮಂಗಲ :
ಕೃಷಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ಅತ್ಯುತ್ತಮ ಸ್ಥಾನದೊಂದಿಗೆ ಮುಂಚೂಣಿಯಲ್ಲಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬಣ್ಣಿಸಿದರು.
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ 72ನೇ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ವಿಜ್ಞಾತಂ ಉತ್ಸವದ ವಸ್ತು ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಏರೋ ಇಂಡಿಯಾ ಶೋ ಮತ್ತು ಅತ್ಯುತ್ತಮ ತಂತ್ರಜ್ಞಾನದ ಪ್ರದರ್ಶನವಾಗಿದೆ. ಇದರ ಜೊತೆಗೆ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಿವಿಧ ಉದ್ಯಮ ವಲಯಗಳಿಂದ 10ಲಕ್ಷ ಕೋಟಿ ರು.ಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ. ಬೇರೆ ದೇಶಗಳಿಂದ ಉದ್ಯಮಿಗಳು ಹೊಸ ತಂತ್ರಜ್ಞಾನ ಹಾಗೂ ಸ್ಥಳೀಯ ಮಾನವ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಹೂಡಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ನವು ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಿದ್ದೇವೆ ಎಂದರು.