ಡಿಜಿಟಲ್ ಮೂಲಸೌಕರ್ಯದಲ್ಲಿ ಕರ್ನಾಟಕ ಮುಂಚೂಣಿ: ಸುಧಾಂಶು ತ್ರಿವೇದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬೆಂಗಳೂರು: ಡಿಜಿಟಲ್ ಮೂಲಸೌಕರ್ಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಇದು ಡಬಲ್ ಇಂಜಿನ್ ಬಿಜೆಪಿ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಿತ್ತೀಯ ನಿಧಿ, ಐಎಂಎಫ್ ನ ಏಪ್ರಿಲ್‍ನ ವರದಿಯಂತೆ ಭಾರತದಲ್ಲಿನ ಡಿಜಿಟಲ್ ಮೂಲಸೌಕರ್ಯವು ಇಡೀ ವಿಶ್ವಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಕೋವಿಡ್ ಸಾಂಕ್ರಾಮಿಕ ವೇಳೆ ಆರಂಭಿಸಿದ ಕೋವಿನ್ ನಿಂದ ಕಲಿಯುವಂತೆಯೂ ಇತರ ದೇಶಗಳಿಗೆ ಐಎಂಎಫ್ ಸಲಹೆ ಮಾಡಿದೆ. ಇದೇ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಇದೆಲ್ಲವೂ ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ಅವರ ದೂರದೃಷಿಯಿಂದ ಸಾಧ್ಯವಾಗಿದೆ. ಕರ್ನಾಟಕವೂ ಸಹ ಡಿಜಿಟಲ್ ಮೂಲಸೌಕರ್ಯದಲ್ಲಿ ಮುಂಚೂಣಿಯಲ್ಲಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಈ ಸಾಧನೆ ಮಾಡಲಾಗಿದೆ. ಭಾರತಕ್ಕೆ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಸಾರ್ವಕಾಲಿಕ ಏರಿಕೆಯಾಗಿದೆ. ಈ ಪೈಕಿ ಅರ್ಧಕ್ಕೂ ಅಧಿಕ ಅಂದರೆ, ಶೇಕಡ 53ರಷ್ಟು ಕರ್ನಾಟಕಕ್ಕೇ ಹರಿದು ಬಂದಿದೆ. ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಹೇಳಿದರು.

2022ರಲ್ಲಿ ಒಟ್ಟಾರೆ ವಿದೇಶಿ ನೇರ ಬಂಡವಾಳದ ಪೈಕಿ ಶೇಕ 38ರಷ್ಟು ಕರ್ನಾಟಕಕ್ಕೇ ಬಂದಿದೆ. ಕಳೆದ ಕೆಲ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿನ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರ ತಂತ್ರಜ್ಞಾನ ಪರಿವರ್ತನೆಯನ್ನು ತಂದಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ವಿಶ್ವದಲ್ಲೇ ಮಹತ್ವದ ಸ್ಥಾನ ಒದಗಿಸಿದ್ದಾರೆ. ರಾಜ್ಯವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರ ಮುಂದೆಯೂ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಭಾರತ ಮೊಬೈಲ್ ಹ್ಯಾಂಡ್‍ಸೆಟ್ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಸೆಮಿಕಂಡಕ್ಟರ್ ಚಿಪ್ ಗಳನ್ನು ಆತ್ಮನಿರ್ಭರ್ ಭಾರತ್ ಅಡಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದ್ದು, ಕರ್ನಾಟಕದಲ್ಲೂ ಇವು ಅಧಿಕವಾಗಿ ಉತ್ಪಾದನೆಗೊಳ್ಳಲಿವೆ. ಡಬಲ್ ಇಂಜಿನ್ ಸರ್ಕಾರ ಏನು ಸಾಧಿಸಿದೆಯೋ ಮುಂದೆಯೂ ಸಾಧಿಸಲಿದೆ. ಕರ್ನಾಟಕ ಮತ್ತು ಬೆಂಗಳೂರು ವಿಶ್ವಭೂಪಟದಲ್ಲಿ ವಿಶೇಷ ಸ್ಥಾನ ಪಡೆಯಲಿವೆ ಎಂದು ಹೇಳಿದರು.

ಈ ಹಿಂದೆ ವಿವಿಧ ಯೋಜನೆಗಳ ಸರ್ಕಾರದ ಹಣದ ಪೈಕಿ ಶೇಕಡ 15ರಷ್ಟು ಮಾತ್ರ ಫಲಾನುಭವಿಗಳಿಗೆ ತಲುಪುತ್ತಿತ್ತು. ಶೇಕಡ 85ರಷ್ಟು ಸೋರಿಕೆಯಾಗುತ್ತಿತ್ತು. ಇದನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿಯೇ ಒಪ್ಪಿಕೊಂಡಿದ್ದಾರೆ. ಆದರೆ ಇದೀಗ ಪೂರ್ಣ ಮೊತ್ತ ಕುಗ್ರಾಮಗಳಲ್ಲಿರುವ ವ್ಯಕ್ತಿಗಳಿಗೆ ತಲುಪುತ್ತಿದೆ. ಡಿಜಿಟಲ್ ವ್ಯವಸ್ಥೆಯಿಂದ ಇದು ಸಾಧ್ಯವಾಗಿದೆ ಎಂದು ನುಡಿದರು.

ಡಿಜಿಟಲ್ ವೇದಿಕೆಯು ಆರೋಗ್ಯ ಕ್ಷೇತ್ರದಲ್ಲೂ ಭಾರೀ ಪರಿವರ್ತನೆ ತಂದಿದೆ. ಕರ್ನಾಟಕದಲ್ಲಿ 31.74 ಲಕ್ಷ ಆಯುಷ್ಮಾನ್ ಕಾರ್ಡ್‍ಗಳನ್ನು ನೀಡಲಾಗಿದೆ. ಈ ಯೋಜನೆಯಲ್ಲಿ 40 ಲಕ್ಷ ಫಲಾನುಭವಿಗಳಾಗಿದ್ದಾರೆ. ಇದು ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಬಿಜೆಪಿ, ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿ, ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುತ್ತಿದ್ದರೆ, ಕಾಂಗ್ರೆಸ್ ಒಡೆದಾಳುವ, ವಿಧ್ವಂಸಕ ಮತ್ತು ಮೂಲಭೂತವಾದಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಎಂದು ಹೇಳಿದರು. ಬಿಜೆಪಿಗೆ ಸಬ್-ಕ-ಸಾಥ್, ಸಬ್-ಕ-ವಿಕಾಸ್, ಸಬ್-ಕ-ವಿಶ್ವಾಸ್ ಮೇಲೆ ವಿಶ್ವಾಸವಿದೆ. ಆದರೆ ಕಾಂಗ್ರೆಸ್, ದೇಶದ್ರೋಹಿಗಳ ಮೇಲೆ, ಸಮಾಜ ವಿರೋಧಿ ಶಕ್ತಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಟೀಕಿಸಿದರು.

ಮೂಲಭೂತವಾದಿ ಮುಸ್ಲೀಮರನ್ನು ರಕ್ಷಿಸುವತ್ತ ಕೆಲಸ ಮಾಡುತ್ತಿದ್ದು, ಅವರನ್ನು ಪ್ರಚೋದಿಸುತ್ತಿದೆ. ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಉತ್ತರ ಪ್ರದೇಶದ ಇಮ್ರಾನ್ ಪ್ರತಾಪ್ ಗಡಿಯಾ ಇದ್ದಾನೆ. ಈತ, ಇತ್ತೀಚೆಗೆ ಹತ್ಯೆಯಾದ ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್‍ನ ಆತ್ಮೀಯ ಸ್ನೇಹಿತ. ಅಲ್ಲದೆ, ಅತೀಕ್ ಅಹ್ಮದ್ ತನ್ನ ಗುರುವೆಂದು ಹೇಳುತ್ತಿದ್ದ ಇಮ್ರಾನ್ ಅತೀಕ್‍ನ ಮೇಲೆ ಶಾಹಿರಿಗಳನ್ನು ಬರೆಯುತ್ತಿದ್ದ. ಇಮ್ರಾನ್‍ನ ಕಾರ್ಯಕ್ರಮಗಳಲ್ಲಿ ಅತೀಕ್ ಭಾಗವಹಿಸುತ್ತಿದ್ದ. ಇಮ್ರಾನ್‍ನ ಶಾಹಿರಿಗಳು ದೇಶದ್ರೋಹದ , ಸಮಾಜ ವಿರುದ್ಧದ ಮತ್ತು ಹಿಂದೂಗಳ ವಿರುದ್ಧ ಮುಸಲ್ಮಾನರನ್ನು ಎತ್ತಿಕಟ್ಟುವುದನ್ನು ಒಳಗೊಂಡಿವೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದು, ಸಮುದಾಯಗಳನ್ನು ಅಗೌರವದಿಂದ ನೋಡುತ್ತಿದೆ ಎಂದು ಅವರು ಹೇಳಿದರು.

ಮಾಧ್ಯಮ ಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಾಧ್ಯಮ ಸಹ ಸಂಚಾಲಕ ಸಂಜಯ್ ಮಯೂಕ್, ರಾಜ್ಯ ವಕ್ತಾರರು ಮತ್ತು ವಿಧಾನಪರಿಷತ್ ಸದಸ್ಯೆ ಡಾ.ತೇಜಸ್ವಿನಿ ಗೌಡ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!