ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ BJP ಆಂತರಿಕ ಕಿತ್ತಾಟ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದ್ದು, ಮುಂದೇನು ಎಂಬ ಗೊಂದಲ ಸ್ವತಃ ರಾಜ್ಯ ನಾಯಕರಲ್ಲೂ ಕಾಡುತ್ತಿದೆ. ಇದರ ನಡುವೆ ಇಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಅಶೋಕ್ ಜತೆ ಮಹತ್ವದ ಮೀಟಿಂಗ್ ನಡೆಸಿ, ರಾಜ್ಯದಲ್ಲಾಗುತ್ತಿರುವ ಬೆಳವಣಿಗಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ನಡುವೆ ರೆಬೆಲ್ ನಾಯಕರು ದೆಹಲಿ ದಂಡಯಾತ್ರೆ ಕೈಗೊಂಡಿದ್ದರು. ಮತ್ತೊಂದೆಡೆ ವಿಜಯೇಂದ್ರ ಬಣ ಸುದ್ದಿಗೋಷ್ಠಿ ನಡೆಸಿ ವಿರೋಧಿ ಬಣದ ಮೇಲೆ ಕಿಡಿಕಾರಿದ್ದರು. ಇವರ ಈ ಬಣ ಬಡಿದಾಟ ನಿಲ್ಲುವಂತೆ ಕಾಣಲ್ಲ ಎನ್ನುವ ಕಾರಣಕ್ಕೆ ಹೈಕಮಾಂಡ್ ನಾಯಕರಿಂದ ರಾಜ್ಯ ನಾಯಕರಿಗೆ ಕಠಿಣ ಸಂದೇಶ ರವಾನೆ ಮಾಡಲಾಗಿದೆ.
ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮೂಲಕ ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದೆ.
ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮಾತನಾಡಿ, ಪಕ್ಷದಲ್ಲಿ ಎಲ್ಲೂ ಗಂಭೀರತೆ ಕಾಪಾಡಿ ಎನ್ನುವ ಮೂಲಕ ಒಳಬೇಗುದಿಯ ಕಿಚ್ಚು ಹಚ್ಚಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ನಾನು ಮತ್ತೊಮ್ಮೆ ಹೇಳುದುವಕ್ಕೆ ಇಷ್ಟ ಪಡುತ್ತೇನೆ. ನಾನು ಎ ಅಥವಾ ಬಿ ಅಂತ ಹೇಳುತ್ತಿಲ್ಲ. ಇದು ಪ್ರತಿಯೊಬ್ಬರಿಗೂ ಅನ್ವಯ ಆಗುತ್ತದೆ. ಗಂಭೀರತೆ ಹಾಗೂ ಶಾಂತಿಯನ್ನು ಕಾಪಾಡಿ. ಪ್ರತಿಯೊಬ್ಬರಿಗೆ ಗೌರವ ಕೊಡಿ. ಕಾರ್ಯಕರ್ತರಿಗೆ ಮತ್ತೊಮ್ಮೆ ಹೇಳುತ್ತೇನೆ. ಶಾಂತಿಯುತ ವಾತಾವರಣ ಕಾಪಾಡಿಕೊಳ್ಳಿ, ಸಹಭಾಗಿತ್ವ, ಅಣ್ಣತಮ್ಮರಂತಹ ವಾತಾವರಣ ನಿರ್ಮಿಸಿ. ಎಂತಹದ್ದೇ ಸಮಸ್ಯೆಯನ್ನಾದರೂ ಬಗೆಹರಿಸುವಂತಹ ನಾಯಕತ್ವ ನಮ್ಮಲ್ಲಿ ಇದೆ. ಪಕ್ಷ ಈ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಲಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಸ್ಥಾನದ ವಿಚಾರ ಹೈಕಮಾಂಡ್ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ಮಾಡುತ್ತದೆ. ಅದರ ಬಗ್ಗೆ ಯಾರೂ ಪ್ರತಿಕ್ರಿಯೆ ಕೊಡಬಾರದು. ಬಿಜೆಪಿ ಎಲ್ಲಾ ರಾಜ್ಯ ನಾಯಕರು ಪಕ್ಷದ ಶಿಸ್ತು ಪಾಲನೆ ಮಾಡಬೇಕು. ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆಯೂ ಮಾತಾಡುವಂತೆ ಇಲ್ಲ ಎಂದಿದ್ದಾರೆ.