ಹೊಸದಿಗಂತ ವರದಿ, ಬಳ್ಳಾರಿ:
ಕೋವಿಡ್-19 ಹೆಮ್ಮಾರಿ ಸೋಂಕಿನ ಹೊಡೆತಕ್ಕೆ ಎಲ್ಲರೂ ತತ್ತಿಸಿರಿದ್ದು, ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರು ಒತ್ತಾಯಿಸಿದರು.
ನಗರದ ಸಂಸದರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೊದಲು ಕೋವಿಡ್-19 ನಿಂದ ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಕೊರೊನಾ ಹೆಮ್ಮಾರಿ ಅರ್ಭಟಕ್ಕೆ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕು ಮೂರಾಬಟ್ಟೆಯಾಗಿದೆ. ಬಹುತೇಕ ಎಲ್ಲ ವಲಯಗಳಿಗೂ ಆರ್ಥಿಕವಾಗಿ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಪಂಚ ರಾಜ್ಯಗಳ ಚುನಾವಣೆ ಮುಂದಿಟ್ಟುಕೊಂಡು ಬಜೆಟ್‌ನಲ್ಲಿ ಆದ್ಯತೆ ನೀಡಲಿದೆ ಎನ್ನುವ ಆತಂಕವಿದೆ. ಅದು ಏನೇ ಇದ್ದರೂ ನಮ್ಮ ರಾಜ್ಯಕ್ಕೆ ಮೊದಲ ಆದ್ಯತೆ ನೀಡಿ ಎಲ್ಲ ವರ್ಗದವರ ಹಿತ ಕಾಪಾಡಲು ಮುಂದಾಗಬೇಕು. ಅದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಕೇಂದ್ರದ ಹಣಕಾಸು(ವಿತ್ತ) ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ನಮ್ಮ ರಾಜ್ಯದಿಂದ ಆಯ್ಕೆಯಾಗಿದ್ದಾರೆ, ಹೆಚ್ಚು ಸಂಸದರು ರಾಜ್ಯದಿಂದ ಆಯ್ಕೆಯಾಗಿದ್ದಾರೆ, ಕರ್ನಾಟಕಕ್ಕೆ ಬಜೆಟ್ ನಲ್ಲಿ ಸಿಂಹಪಾಲು ನೀಡಬೇಕು ಎಂದು ಒತ್ತಾಯಿಸುವೆ ಎಂದರು.
ಬಳ್ಳಾರಿ-ಹೊಸಪೇಟೆ, ಬಳ್ಳಾರಿ-ಚೆಳ್ಳಗುರ್ಕಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೂಡಲೇ ಪೂರ್ಣಗೊಳಿಸಲು ಮುಂದಾಗಬೇಕು.
ಗ್ಯಾಮನ್ ಇಂಡಿಯಾ ಕಂ.ಅವರು ಗುತ್ತಿಗೆ ಪಡೆದಿದ್ದು, ಎರಡೂ ಮಾರ್ಗಗಳ ರಸ್ತೆಗಳನ್ನು ಅರ್ಧ ಮಾತ್ರ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ. ಪ್ರಶ್ನಿಸಿದರೂ ಇಲ್ಲಿವರೆಗೂ ಕ್ರಮವಿಲ್ಲ, ಕೂಡಲೇ ಗ್ಯಾಮನ್ ಇಂಡಿಯಾ ಎಜೆನ್ಸಿ ಬದಲಾಯಿಸಿ, ಬೇರೆಯವರಿಗೆ ವಹಿಸಿ ಕೆಲಸ ಪೂರ್ಣಗೊಳಿಸಬೇಕು. ಅವರೇ ಪೂರ್ಣ ಗೊಳಿಸಿದರೂ ಅಭ್ಯಂತರವಿಲ್ಲ, ಸವಾರರ ಅನುಕೂಲಕ್ಕಾಗಿ ರಸ್ತೆ ನಿರ್ಮಾಣ ನಿಗಧಿತ ಅವದಿಯಲ್ಲಿ ಪುರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ವೆಂಕಟರಮಣ, ಬೂಡಾ ಮಾಜಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಮಾಧ್ಯಮ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆ ಸದಸ್ಯರಾದ ವಿವೇಕ್, ನಂದೀಶ್, ಮಹ್ಮದ್ ಆಸೀಫ್, ಸುಬ್ಬರಾಯುಡು, ಅಸ್ಲಾಂಭಾಷಾ ಇತರರಿದ್ದರು.