ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್

ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಬೆಳಗ್ಗೆ ಬೆಳಿಗ್ಗೆ 9.15 ರಿಂದ ಮಧ್ಯಾಹ್ನ 1.30 ವರೆಗೆ ಪರೀಕ್ಷೆ ನಡೆಯಲಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ 6,84,255 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 6,00,519 ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದರೆ, 61808 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 21,928 ಖಾಸಗಿ ವಿದ್ಯಾರ್ಥಿಗಳು. ಈ ಪೈಕಿ ಬಾಲಕರು 3,46,936 ಹಾಗೂ ಬಾಲಕಿಯರು 3,47,319 ಮಂದಿ ಇದ್ದಾರೆ. ಕಲಾ ವಿಭಾಗದಲ್ಲಿ 2,28,167 ಮಂದಿ, ವಾಣಿಜ್ಯ ವಿಭಾಗದಲ್ಲಿ 2,45,519 ಮಂದಿ ಹಾಗೂ
ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ಪರೀಕ್ಷೆ ಬರೆಯಲಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕ್ರಮ ವಹಿಸುವ ಸಲುವಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ವಿತರಿಸುವ ಚಟುವಟಿಕೆಗಳನ್ನು ನಿರ್ವಹಿಸುವ ಖಜಾನೆಯ ಒಳಗೆ ಮತ್ತು ಹೊರಗೆ 24×7 ಸಿಸಿಟಿವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗೆ ವಿಶೇಷ ಜಾಗೃತ ದಳ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್‌ ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.

ವಿದ್ಯಾರ್ಥಿಗಳು, ಪರೀಕ್ಷಾ ಮೇಲ್ವಿಚಾರಕರು, ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲನೆ ಮಾಡಲು
ಸೂಚಿಸಲಾಗಿದೆ. ಹಿಜಾಬ್ ಅಥವಾ ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ. ಸಮವಸ್ತ್ರ ಇರುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು, ಸಮವಸ್ತ್ರ ಇಲ್ಲದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅನ್ವಯ ಆಗುವುದಿಲ್ಲ.

ಇಂದಿನಿಂದ ಮೇ 18ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಜರಾಗಲು ಪ್ರಯಾಣಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!