Friday, March 5, 2021

Latest Posts

ವಿಜಯ್ ಹಜಾರೆ ಟ್ರೋಫಿ ಆರಂಭದಲ್ಲೇ ಮುಗ್ಗರಿಸಿದ ಕರ್ನಾಟಕ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಆರಂಭದಲ್ಲೇ ಕರ್ನಾಟಕವು ಮುಗ್ಗರಿಸಿದೆ. ಸಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ
ಕರ್ನಾಟಕವು ಉತ್ತರ ಪ್ರದೇಶದ ವಿರುದ್ಧ ಸೋಲು ಕಂಡಿತು.
ಕರ್ನಾಟಕದ ಬ್ಯಾಟಿಂಗ್ ವೈಫಲ್ಯವು ತಂಡಕ್ಕೆ ದೊಡ್ಡ ಮೊತ್ತ ಕೂಡಿಸಲು ವಿಫಲವಾಗುವಂತೆ ಮಾಡಿತು. ಇದರಿಂದಾಗಿ ಉತ್ತರ ಪ್ರದೇಶವು ನಿರಾಯಾಸವಾಗಿ  ಗೆಲುವು ಸಾಧಿಸುವಂತಾಯಿತು.
45. 2 ಓವರುಗಳಲ್ಲಿ ಉತ್ತರ ಪ್ರದೇಶವು 4 ವಿಕೆಟಿಗೆ 215 ರನ್ ಗಳಿಸಿದ್ದಾಗ ಮಳೆ ಸುರಿದು ಪಂದ್ಯ ನಿಂತಿತು. ವಿಜೆಡಿ ನಿಯಮದನ್ವಯ ಉತ್ರ ಪ್ರದೇಶವನ್ನು ವಿಜಯಿ ಎಂದು ಘೋಷಿಸಲಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕವು ನಿಗದಿತ 50 ಓವರುಗಳಲ್ಲಿ  8 ವಿಕೆಟಿಗೆ 246 ರನ್ ಗಳಿಸಲಷ್ಟೆ ಶಕ್ತವಾಯಿತು. ಆರಂಭಿಕ ಆಟಗಾರ ಹಾಗೂ ನಾಯಕ ಸಮರ್ಥ್ ಕೇವಲ 3 ರನ್ ಗಳಿಸಿ ಔಟಾದರು. ದೇವದತ್ತ್ ಪಡಿಕ್ಕಲ್ ಎರಡನೇ ವಿಕೆಟಿಗೆ ಸಿದ್ಧಾರ್ಥ್ ಜತೆಗೆ
82 ರನ್ ಸೇರಿಸಿದರಾದರೂ ರನ್ ಗತಿ ನಿಧಾನವಾಗಿತ್ತು. ಪಡಿಕ್ಕಲ್ 52 ರನ್ ಗಳಿಸಿದರಾದರೂ ಅದಕ್ಕೆ 84 ಎಸೆತಗಳನ್ನು ಬಳಸಿದರು. ಸಿದ್ಧಾರ್ಥ್ 38 ರನ್‌ಗಳಿಗೆ  71 ಎಸೆತಗಳನ್ನು ಉಪಯೋಗಿಸಿದರು.
ಅನಿರುದ್ಧ ಜೋಶಿ 48 ಎಸೆತಗಳಿಂದ 68 ರನ್ ಗಳಿಸಿ ರನ್‌ಗೆ ವೇಗ ನೀಡಿದರು. ಅಂತ್ಯದಲ್ಲಿ ಅಭಿಮನ್ಯು ಮಿಥುನ್ 2 ಸಿಕ್ಸರ್ ಸಹಿತ
17 ರನ್ ಗಳಿಸಿದ್ದು, ತಂಡದ ಗೌರವಾರ್ಹ ಮೊತ್ತಕ್ಕೆ ಕಾರಣವಾಯಿತು. ಕರುಣ್ ನಾಯರ್ 33 ರನ್‌ಗಳ ಕೊಡುಗೆ ನೀಡಿದರು.
ಉತ್ತರಪ್ರದೇಶದ ಆರಂಭವೇ ಗಟ್ಟಿಯಾಗಿತ್ತು. ಅಭಿಷೇಕ್ ಗೋಸ್ವಾಮಿ (54) ಮತ್ತು ಕರಣ್ ಶರ್ಮಾ(40) ಮೊದಲ ವಿಕೆಟಿಗೆ
102 ರನ್ ಸೇರಿಸಿದರು. ಇವರಿಬ್ಬರೂ ಬೆನ್ನುಬೆನ್ನಿಗೆ ನಿರ್ಗಮಿಸಿದರು. ಮತ್ತೆರಡು ವಿಕೆಟ್‌ಗಳನ್ನು ಬೇಗನೆ ಕೀಳಲೂ ಕರ್ನಾಟಕ ಶಕ್ತವಾದಾಗ ವಿಜಯದ ಆಸೆ ಕೊನರಿತು.  ಆದರೆ ರಿಂಕು ಸಿಂಗ್ ಮತ್ತು ಉಪೇಂದ್ರ ಯಾದವ್ ಮುರಿಯದ ಜತೆಯಾಟದಲ್ಲಿ ತಂಡವನ್ನು ವಿಜಯದತ್ತ ಕೊಂಡೊಯ್ದರು.
ಮಳೆಯಿಂದಾಗಿ ಆಟ ನಿಂತಾಗ ರಿಂಕು ಸಿಂಗ್ 61 ಎಸೆತಗಳಿಂದ 62 ರನ್ (7ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಉಪೇಂದ್ರ ಯಾದವ್ 26 ರನ್ ಗಳಿಸಿದ್ದರು.
ಈ ಗೆಲುವಿನಿಂದ ಉತ್ತರ ಪ್ರದೇಶಕ್ಕೆ 4 ಅಂಕ ದೊರಕಿತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss