ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಹಿಳೆಯರು ಬಾಳೆಕಾಯಿ ಹಿಟ್ಟನ್ನು ತಯಾರಿಸಿ ಅದರಿಂದ ಹಲ ಬಗೆಯ ಖಾದ್ಯಗಳನ್ನು ತಯಾರಿಸುತ್ತಿರುವ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಗುರುತಿಸಿ ಪ್ರಶಂಸಿಸಿದ್ದಾರೆ.
ಕರ್ನಾಟಕದ ಮಹಿಳೆಯರು ಕೊರೋನಾ ಕಾಲದಲ್ಲಿ ಮಾಡಿರುವ ಈ ಅನ್ವೇಷಣೆ ವಿಶಿಷ್ಟವಾದದ್ದಾಗಿದೆ. ಬಾಳೆಹಿಟ್ಟಿನಿಂದ ದೋಸೆ, ಗುಲಾಬ್ ಜಾಮೂನ್ ಮುಂತಾದವನ್ನು ಅವರು ಮಾಡುತ್ತಿದ್ದಾರೆ. ಇವನ್ನೆಲ್ಲ ಅವರು ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಂಡಿದ್ದಾರೆ. ಹೆಚ್ಚು ಹೆಚ್ಚು ಜನರು ಈ ಬಾಳೆ ಹಿಟ್ಟಿನ ಬಗ್ಗೆ ತಿಳಿಯುತ್ತ ಬಂದಂತೆಲ್ಲ ಇದಕ್ಕೆ ಬೇಡಿಕೆಯೂ ಹೆಚ್ಚಾಗಿ ಮಹಿಳೆಯರ ಆದಾಯವೂ ಹೆಚ್ಚಲಿದೆ. ಹೇಗೆ ಉತ್ತರ ಪ್ರದೇಶದ ಕೆಲ ಮಹಿಳೆಯರು ಬಾಳೆಯ ನಾರಿನಿಂದ ಕೈಚೀಲ ಮತ್ತಿತ್ತರ ವಸ್ತುಗಳನ್ನು ತಯಾರಿಸುತ್ತಾರೋ ಹಾಗೆಯಾ ಕರ್ನಾಟಕದ ಮಹಿಳೆಯರ ಅನ್ವೇಷಣೆ ಹೊಸ ಆಯಾಮವನ್ನು ನೀಡಿದೆ. ಇಂಥ ಅನ್ವೇಷಣೆಗಳೇ ನಿರಂತರ ಹೊಸದನ್ನು ಕಂಡುಕೊಳ್ಳುವುದಕ್ಕೆ ಪ್ರೇರಕವಾಗಿರುತ್ತವೆ ಎಂದು ಪ್ರಧಾನಿ ಮೋದಿ ಬಾಳೆಹಿಟ್ಟಿನ ಪ್ರಯೋಗವನ್ನು ಕೊಂಡಾಡಿದ್ದಾರೆ.
ಉಳಿದಂತೆ ಪ್ರಧಾನಿ ಪ್ರಸ್ತಾಪಿಸಿದ ವಿಷಯಗಳು: ಅಮೃತ ಮಹೋತ್ಸವದ ಅಂಗವಾಗಿ ನೂತನ ರಾಷ್ಟ್ರಗಾನ ಡಾಟ್ ಕಾಮ್ ಮೂಲಕ ರಾಷ್ಟ್ರ ಗೀತೆ ರೆಕಾರ್ಡ್ ಮಾಡಿ ಅಪ್ಲೋಡ್ ಮಾಡುವಂತೆ ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ.
ಈ ತಿಂಗಳ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಈ ಬಾರಿ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ದೇಶದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಮಾರ್ಚ್ 12ರಂದು ಅಮೃತ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
ಅಮೃತ ಮಹೋತ್ಸವ ಸರ್ಕಾರದ ಕಾರ್ಯಕ್ರಮವಲ್ಲ, ಬದಲಿಗೆ ಇದು ಜನರ ಕಾರ್ಯಕ್ರಮ. ದೇಶದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಭಾಗಿಯಾಗಿ ಸ್ವಾತ್ರಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳಿ ಎಂದರು.
ಆತ್ಮ ನಿರ್ಭರ ಭಾರತದ ಕನಸಿನಂತೆ ಎಲ್ಲರೂ ಕೈಮಗ್ಗ ಬಟ್ಟೆ ಖರೀದಿ ಮಾಡಿದರೆ, ಜನರಿಗೆ ಸಹಾಯವಾಗಲಿದೆ ಎಂದು ಮನವಿ ಮಾಡಿದರು.
ಐಐಟಿ ಮದ್ರಾಸ್ ನಲ್ಲಿ ವಿದ್ಯಾರ್ಥಿಗಳು 3ಡಿ ಪ್ರಿಂಟಿಂಗ್ ಯೂನಿಟ್ ಸ್ಥಾಪನೆ ಮಾಡಿದ್ದು, ಈ ತಂತ್ರಜ್ಞಾನದಿಂದ ನಿರ್ಮಾಣ ಕ್ಷೇತ್ರದಲ್ಲಿ ವೇಗ ಕಾಣುತ್ತಿದ್ದೇವೆ ಎಂದರು.