ಹೊಸದಿಗಂತ ವರದಿ, ಮಡಿಕೇರಿ
ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಗೊಂಡು ಮೇ 5ಕ್ಕೆ 107 ವರ್ಷಗಳನ್ನು ಪೂರೈಸುತ್ತಿದೆ. ಇದರ ಪ್ರಯುಕ್ತ ಮೇ 5 ರಂದು ಜಿಲ್ಲಾದ್ಯಂತ ಕನ್ನಡ ಸಾಹಿತ್ಯ ಪರಿಷತ್ತಿನ 107 ನೇ ವರ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಂಸ್ಥಾಪನಾ ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪರಿಷತ್ತಿನ ಸಂಸ್ಥಾಪನಾ ದಿನದ ಕುರಿತು ಚಿಕ್ಕಅಳುವಾರದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜ಼ಮೀರ್ ಅಹಮದ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಪೋಕ್ಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅವನಿಜ ಸೋಮಯ್ಯ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್, ನಾಪೋಕ್ಲು ಹೋಬಳಿ ನೂತನ ಅಧ್ಯಕ್ಷ ನೆರವಂಡ ಉಮೇಶ್ ಉಪಸ್ಥಿತರಿರುತ್ತಾರೆ. ಜಾನಪದ ಕಲಾವಿದರಾದ ಕೋಡಿಮಣಿಯಂಡ ಬೋಪಯ್ಯ ಅವರನ್ನು ಸನ್ಮಾನಿಸಲಾಗುತ್ತದೆ.
ಅಲ್ಲದೆ ಜಿಲ್ಲೆಯ ಐದು ತಾಲೂಕು ಕಸಾಪ ವತಿಯಿಂದ ಆಯಾ ತಾಲೂಕು ಕೇಂದ್ರಗಳಲ್ಲೂ ಸಂಸ್ಥಾಪನಾ ದಿನ ಕಾರ್ಯಕ್ರಮ ಜರುಗಲಿದ್ದು, ಐದೂ ತಾಲೂಕಿನಲ್ಲಿ ಉಪನ್ಯಾಸ ಮತ್ತು ಕಲಾವಿದರಿಗೆ ಸನ್ಮಾನ ನಡೆಯಲಿದೆ ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ತಿಳಿಸಿದ್ದಾರೆ.