Tuesday, August 16, 2022

Latest Posts

ಕಾಸರಗೋಡು ಜಿಲ್ಲೆಯ ಆಕ್ಸಿಜನ್ ವೆಂಟಿಲೇಟರ್ ಕೊರತೆ ನೀಗಿಸಲು ಸೂಕ್ತ ಕ್ರಮ, ಆತಂಕ ಬೇಡ: ಕಂದಾಯ ಸಚಿವ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯ ಆಕ್ಸಿಜನ್ ವೆಂಟಿಲೇಟರ್ ಕೊರತೆ ಪರಿಹಾರಕ್ಕೆ ಕ್ರಮ ಆರಂಭಿಸಲಾಗಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಕೇರಳ ಕಂದಾಯ, ವಸತಿ ನಿರ್ಮಾಣ ಹಾಗೂ ಜಿಲ್ಲಾ ಉಸ್ತುವಾರಿ ಖಾತೆ ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯ ನಂತರ ನಗರದ ಸರಕಾರಿ ಅತಿಥಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಕ್ಸಿಜನ್ ಮುಗ್ಗಟ್ಟಿನ ಬಗ್ಗೆ ಮಾಧ್ಯಮಗಳು ಪ್ರಕಟಿಸಿದ ವರದಿಯ ಕುರಿತು ಮುಖ್ಯಮಂತ್ರಿ , ಆರೋಗ್ಯ ಸಚಿವೆ, ಜಿಲ್ಲಾಧಿಕಾರಿ ಮೊದಲಾದವರೊಂದಿಗೆ ನಡೆಸಿದ ವಿಚಾರ ವಿನಿಮಯದ ಪರಿಣಾಮ ಕಾಸರಗೋಡು ಜಿಲ್ಲೆಗೆ ಇತರ ಜಿಲ್ಲೆಗಳಿಂದ ಆಕ್ಸಿಜನ್ ರವಾನೆ ಸಾಧ್ಯವಾಗಿದೆ. 16 ಸಾವಿರಕ್ಕಿಂತಲೂ ಅಧಿಕ ಕೋವಿಡ್ ಬಾಧಿತರು ಜಿಲ್ಲೆಯಲ್ಲಿದ್ದಾರೆ. ಇವರಲ್ಲಿ ಶೇಕಡಾ 95 ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 682 ಮಂದಿ ಮಾತ್ರ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇವರಲ್ಲಿ ಆಕ್ಸಿಜನ್ ಅಗತ್ಯವಿರುವವರ ಸಂಖ್ಯೆ ತೀರಾ ಕಡಿಮೆ ಎಂದು ಅವರು ವಿವರಿಸಿದರು. ಜಿಲ್ಲೆಯಲ್ಲಿ ಪ್ರತಿದಿನ 360 ಆಕ್ಸಿಜನ್ ಸಿಲಿಂಡರ್ ಗಳ ಅಗತ್ಯವಿದೆ. ಇದಕ್ಕಾಗಿ ಅಹಮ್ಮದಾಬಾದ್ ನಿಂದ ತರಿಸಲು ಆರ್ಡರ್ ಮಾಡಿದ್ದರೂ ಲಭಿಸಲು 4 ವಾರಗಳು ಬೇಕಾದೀತು. ಈ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಕ್ಸಿಜನ್ ಚಾಲೆಂಜ್ ನಡೆಸಲಾಗಿದೆ. ಜಿಲ್ಲಾಧಿಕಾರಿ ತಮ್ಮ ಫೇಸ್ ಬುಕ್ ಪುಟದಲ್ಲಿ ನಡೆಸಿದ ಆಕ್ಸಿಜನ್ ಚಾಲೆಂಜ್ ಮೂಲಕ 150 ಸಿಲಿಂಡರ್ ಗಳು ಕಳೆದ ದಿನ ಲಭಿಸಿವೆ. ಹೆಚ್ಚುವರಿ 150 ಸಿಲಿಂಡರ್ ಗಳು ಲಭಿಸಿದರೆ ಅದು ಜಿಲ್ಲೆಗೆ ದೊಡ್ಡ ಸಮಾಧಾನವಾಗಲಿದೆ ಎಂದು ಸಚಿವರು ಹೇಳಿದರು. ಈ ರೀತಿ ಖರೀದಿಸುವ ಸಿಲಿಂಡರ್ ಗಳನ್ನು ಸರಕಾರವು ಖರೀದಿಸುವ ಸಿಲಿಂಡರ್ ಗಳು ಲಭಿಸಿದ ತಕ್ಷಣ ಮಾಲೀಕರಿಗೆ ಮರಳಿ ನೀಡಲಾಗುವುದು ಎಂದೂ ಅವರು ನುಡಿದರು.
ಜಿಲ್ಲೆಯಲ್ಲಿ ಇದೀಗ 147 ಆಕ್ಸಿಜನ್ ಬೆಡ್ ಗಳಿವೆ. ಒಟ್ಟು 1016 ಆಕ್ಸಿಜನ್ ಬೆಡ್ ಗಳನ್ನು ವ್ಯವಸ್ಥೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. 13 ಲಕ್ಷಕ್ಕೂ ಅಧಿಕ ಜನಸಂಖ್ಯೆ ಕಾಸರಗೋಡು ಜಿಲ್ಲೆಯಲ್ಲಿದೆ. ಸದ್ರಿ ಇವರಲ್ಲಿ ಶೇಕಡಾ 3.3 ಮಂದಿಗೆ ವ್ಯಾಕ್ಸಿನೇಶನ್ ನಡೆದಿದೆ. 54 ವೆಂಟಿಲೇಟರ್ ಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ 7 ವೆಂಟಿಲೇಟರ್ ಗಳು ಮಾತ್ರ ರೋಗಿಗಳಿಗೆ ಬಳಕೆಯಾಗುತ್ತಿವೆ
ಎಂದು ಸಚಿವರು ತಿಳಿಸಿದರು.
ಜೂನ್ ಮೊದಲ ವಾರದೊಂದಿಗೆ ಇರಬಹುದಾದ ಕೋವಿಡ್ ರೋಗಿಗಳ ಗಣನೆಗೆ ಮೇ ತಿಂಗಳ ಮೊದಲ ವಾರದಲ್ಲೇ ಲೆಕ್ಕ ಹಾಕಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನಿವಾರ್ಯವಾಗಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಕುಂಠಿತಗೊಳ್ಳುತ್ತಿರುವುದು ಸಮಾಧಾನಕರ. ಕಳೆದ ಬಾರಿಗಿಂತ ಈ ಬಾರಿ ಜನರು ಸರಕಾರದೊಂದಿಗೆ ಅತೀ ಹೆಚ್ಚು ಸ್ಪಂದಿಸುತ್ತಿದ್ದಾರೆ. ಕೋವಿಡ್ ಸೋಂಕು ಹೆಚ್ಚಳ ಮನಗಂಡು ಸರಕಾರವು ವಿವಿಧ ಅಗತ್ಯದ ಚಟುವಟಿಕೆ ನಡೆಸುತ್ತಿದೆ ಎಂದು ಸಚಿವರು ನುಡಿದರು.
ಸಾರ್ವಜನಿಕರನ್ನು ತಲ್ಲಣಗೊಳಿಸುವ, ಗೊಂದಲಕ್ಕೊಳಪಡಿಸುವ ಸುದ್ದಿಗಳನ್ನು ಈ ಅವಧಿಯಲ್ಲಿ ಪ್ರಕಟಿಸಬಾರದು ಎಂದು ಸಚಿವರು ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss