ಏ.13ರಿಂದ ಎಡನೀರು ಮಠಾಧೀಶರಿಂದ ಮಧೂರಿನ ಸಿದ್ಧಿವಿನಾಯಕ ದೇಗುಲಕ್ಕೆ ಪಾದಯಾತ್ರೆ

ಹೊಸದಿಗಂತ ವರದಿ, ಕಾಸರಗೋಡು
ಇತಿಹಾಸ ಪ್ರಸಿದ್ಧ ಕುಂಬಳೆ ಸೀಮೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಮಧೂರು ಕ್ಷೇತ್ರದಲ್ಲಿ ಮಾರ್ಚ್ 6ರಂದು ಆರಂಭಗೊಂಡ 48 ದಿನಗಳ ಮಂಡಲ ಭಜನಾ ಸಂಕೀರ್ತನೋತ್ಸವದ ಅಂಗವಾಗಿ ನಿತ್ಯ ಭಜನಾ ಕಾರ್ಯಕ್ರಮವು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಚಾಲನೆ ನೀಡಲಿದ್ದಾರೆ. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನೆರವೇರುತ್ತಿರುವ ಈ ಪುಣ್ಯ ಕಾರ್ಯದಲ್ಲಿ ಉಪ್ಪಳ ಕೊಂಡೆವೂರು ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಏಪ್ರಿಲ್ 12ರಂದು ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಅಲ್ಲದೆ ಏಪ್ರಿಲ್ 13ರಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಪಾದಯಾತ್ರೆಯ ಮೂಲಕ ಮಧೂರಿಗೆ ಹೊರಟು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ವಾಮೀಜಿಯವರು ಎಡನೀರಿನಿಂದ ಬೆಳಗ್ಗೆ 6 ಗಂಟೆಗೆ ಪಾದಯಾತ್ರೆ ಆರಂಭಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಕ್ತಜನರು ಭಾಗವಹಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ. ಏಪ್ರಿಲ್ 19ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮಧೂರು ಕ್ಷೇತ್ರಕ್ಕೆ ಚಿತ್ತೈಸಿ ಆಶೀರ್ವಚನ ನೀಡುವರು.
2023ರಲ್ಲಿ ಮಧೂರು ದೇವಾಲಯದ ಬ್ರಹ್ಮಕಲಶೋತ್ಸವ ನಡೆಸುವ ದೃಢ ಸಂಕಲ್ಪದೊಂದಿಗೆ ಕ್ಷೇತ್ರದ ನವೀಕರಣ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಈ ಸಂಕಲ್ಪ ಸಾಕಾರಗೊಳ್ಳುವ ನಿಟ್ಟಿನಲ್ಲಿ ಭಜನಾ ಕಾರ್ಯಕ್ರಮವು ಪ್ರೇರಣೆಯಾಗಲಿ ಎಂಬುದು ಸ್ವಾಮೀಜಿಯವರ ಹಾರೈಕೆಯಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!