ಮರಳಿ ಕಾಶ್ಮೀರ ಕಣಿವೆ ಸೇರುವ ಪಂಡಿತರಿಗೆ ಧೈರ್ಯದ ಕಿವಿಮಾತು ಹೇಳಿದ ಆರ್‌ಎಸ್‌ಎಸ್ ಸರಸಂಘಚಾಲಕ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಜಮ್ಮು: ಭಯೋತ್ಪಾದನೆಯ ಆಕ್ರಮಣದ ನಂತರ 1990ರ ದಶಕದಲ್ಲಿ ತಮ್ಮ ಮನೆಗಳಿಂದ ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರು ಶೀಘ್ರದಲ್ಲೇ ಕಾಶ್ಮೀರ ಕಣಿವೆಯಲ್ಲಿರುವ ತಮ್ಮ ಮನೆಗಳಿಗೆ ಮರಳುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಭರವಸೆ ವ್ಯಕ್ತಪಡಿಸಿದ್ದಾರೆ.

ಜಮ್ಮುವಿನ ಸಂಜೀವನಿ ಶಾರದಾ ಕೇಂದ್ರ (ಎಸ್‌ಎಸ್‌ಕೆ) ಆಯೋಜಿಸಿದ ನವ್ರೇಹ್ ಮಹೋತ್ಸವದ ಕೊನೆಯ ದಿನವಾದ ಭಾನುವಾರ ಕಾಶ್ಮೀರಿ ಹಿಂದು ಸಮುದಾಯವನ್ನು ಉದ್ದೇಶಿಸಿ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ, ಕಾಶ್ಮೀರಿ ಪಂಡಿತರು ತಮ್ಮ ಮನೆಗೆ ಹಿಂದಿರುಗುವ ದಿನ ಬಹಳ ಹತ್ತಿರದಲ್ಲಿದೆ ಎಂಬ ಭಾವನೆ ನನ್ನಲ್ಲಿದೆ ಮತ್ತು ಆ ದಿನ ಶೀಘ್ರದಲ್ಲೇ ಬರಲಿ ಎಂದು ನಾನು ಬಯಸುತ್ತೇನೆ ಎಂದರು.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಅವರು ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರ ನೈಜ ಚಿತ್ರಣವನ್ನು ಬಹಿರಂಗಪಡಿಸಿದೆ. ಕೆಲವರು ಈ ಸಿನಿಮಾವನ್ನು ಬೆಂಬಲಿಸುತ್ತಿದ್ದಾರೆ, ಕೆಲವರು ಅರ್ಧಸತ್ಯ ಎನ್ನುತ್ತಿದ್ದಾರೆ. ಆದರೆ ಈ ಕಟು ಸತ್ಯವನ್ನು ಜಗತ್ತಿಗೆ ಪ್ರಸ್ತುತಪಡಿಸುವ ಮೂಲಕ ಈ ಚಿತ್ರವು ಕೇವಲ ನೋವನ್ನು ಮಾತ್ರ ಪ್ರಸ್ತುತಪಡಿಸಿಲ್ಲ ಎಂದು ಈ ರಾಷ್ಟ್ರದ ಸಾಮಾನ್ಯ ಜನರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳಾಂತರಗೊಂಡ ಕಾಶ್ಮೀರಿಗಳ ಕತೆ ನಮ್ಮನ್ನು ಬೆಚ್ಚಿಬೀಳಿಸಿದೆ ಎಂದು ಹೇಳಿದರು.

ಇಂದು, ಕಾಶ್ಮೀರಿ ಪಂಡಿತರ ವಲಸೆಯ ಸತ್ಯದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿದೆ. ಕಾಶ್ಮೀರಿ ಪಂಡಿತರು ತಮ್ಮ ಸ್ವಂತ ಮನೆಗಳಿಗೆ ಹಿಂತಿರುಗಬೇಕಾದ ಸಮಯ ಇದು. ಅವರನ್ನು ಭವಿಷ್ಯದಲ್ಲಿ ಎಂದಿಗೂ ಅಲ್ಲಿಂದ ಸ್ಥಳಾಂತರಿಸಲು ಸಾಧ್ಯವಿಲ್ಲ. ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿಗೆ ಮರಳಲು ಸಂಕಲ್ಪ ಮಾಡಬೇಕು. ಆದ್ದರಿಂದ ಶೀಘ್ರದಲ್ಲೇ ಪರಿಸ್ಥಿತಿ ಬದಲಾಗಲಿದೆ ಎಂದು ಅವರು ಹೇಳಿದರು.

ಕಾಶ್ಮೀರಿ ಪಂಡಿತರನ್ನು ಹೊರಹೋಗುವಂತೆ ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಯಾರಾದರೂ ಅದಕ್ಕೆ ಪ್ರಯತ್ನಿಸಿದರೆ, ನಂತರ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಾ. ಭಾಗವತ್ ಹೇಳಿದರು.

ಕಾಶ್ಮೀರಿ ಪಂಡಿತರ ಸಮಸ್ಯೆಯನ್ನು ಸಾರ್ವಜನಿಕ ಜಾಗೃತಿ ಮತ್ತು ಯಾವುದೇ ಅಡೆತಡೆಗಳಿಲ್ಲದೇ ಪರಿಹರಿಸಲಾಗುವುದು ಎಂದು ನಾನು ಮೊದಲೇ ಹೇಳಿದ್ದೆ. ಸಂವಿಧಾನದಲ್ಕಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದುಗೊಳಿಸಬೇಕೆಂದು 2011ರಲ್ಲಿಯೇ ಹೇಳಿತ್ತು. ಈಗ 11 ವರ್ಷಗಳ ನಂತರ ನಮ್ಮ ಸಾಮೂಹಿಕ ಪ್ರಯತ್ನದಿಂದಾಗಿ 370ನೇ ವಿಧಿ ಇಲ್ಲವಾಗಿದೆ ಎಂದು ಡಾ. ಮೋಹನ್ ಭಾಗವತ್ ತಿಳಿಸಿದರು.

ಎಸ್‌ಎಸ್‌ಕೆ ಹಲವಾರು ವರ್ಷಗಳಿಂದ ಸಮುದಾಯದ ಸದಸ್ಯರು ಮತ್ತು ಶಾಲಾ ಮಕ್ಕಳೊಂದಿಗೆ ‘ನವ್ರೇಹ್, ತ್ಯಾಗ ಹಾಗೂ ಶೌರ್ಯ ದಿವಸ್’ ಅನ್ನು ಆಚರಿಸುತ್ತಿದೆ. ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಜಗತ್ತಿಗೆ ಎತ್ತಿ ತೋರಿಸಲು ಸೆಮಿನಾರ್‌ಗಳು, ಪ್ರಬಂಧ ಬರಹ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸುತ್ತದೆ. ಚೈತ್ರ (ವಸಂತ) ನವರಾತ್ರಿಯ ಮೊದಲ ದಿನ ಕಾಶ್ಮೀರಿ ಪಂಡಿತರು ನವ್ರೇಹ್ ಹಬ್ಬವನ್ನು ತಮ್ಮ ದೇವತೆ ಶಾರಿಕಾಗೆ ಅರ್ಪಿಸುತ್ತಾರೆ. ಹಬ್ಬದ ಸಮಯದಲ್ಲಿ ದೇವಿಗೆ ಗೌರವ ಸಲ್ಲಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!