Monday, August 8, 2022

Latest Posts

ಕಟ್ಟೆಮಾಡು ಪರಂಬು ಪೈಸಾರಿ ರಸ್ತೆ ಅವ್ಯವಸ್ಥೆ : ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ

ಹೊಸ ದಿಗಂತ ವರದಿ, ಮಡಿಕೇರಿ:

ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯನ್ನು ಶಾಸಕರು ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯ ಗ್ರಾಮಸ್ಥರು, ಮುಂದಿನ ಹತ್ತು ದಿನಗಳ ಒಳಗಾಗಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿ ಜಿ.ಪಂ ಮತ್ತು ತಾ.ಪಂ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ಕಳ್ಳೀರ ಅಜಿತ್ ಮಾತನಾಡಿ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕಟ್ಟೆಮಾಡು ಪರಂಬು ಪೈಸಾರಿ ಗ್ರಾಮಸ್ಥರು ಹಲವಾರು ವರ್ಷಗಳಿಂದ ರಸ್ತೆಯ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಅಲ್ಲದೆ ಹಲವು ಬಾರಿ ಹೋರಾಟ ನಡೆಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂದು ಆರೋಪಿಸಿದರು.
ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಸುಮಾರು 150 ರಿಂದ 200 ಮನೆಗಳಿದ್ದು, ಈ ಭಾಗಕ್ಕೆ ಐಕೊಳ ಹಾಗೂ ಮರಗೋಡು, ಕಟ್ಟೆಮಾಡುವಿನಿಂದ ಬರುವ ರಸ್ತೆಯು ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯು ಸುಮಾರು 4 ಕಿ.ಮೀ. ಉದ್ದ ಹೊಂಡ, ಗುಂಡಿಗಳಿಂದ ಕೂಡಿದ್ದು, ಮಳೆಯ ನೀರು ನಿಂತು ಸಂಪೂರ್ಣ ಕೆಸರುಮಯವಾಗಿ ನಡೆಯಲೂ ಕೂಡ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ತಿ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಕಟ್ಟೆಮಾಡು ಪರಂಬು ಪೈಸಾರಿಗೆ ಪ್ರತೀ ದಿನ ಎರಡು ಶಾಲೆಯ ಬಸ್ಸುಗಳು ಮಕ್ಕಳು ಕರೆದುಕೊಂಡು ಹೋಗಲು ಮತ್ತು ಸಂಜೆ ಮರಳಿ ಮನೆಗೆ ಬಿಡಲು ಬಂದುಹೋಗುತ್ತವೆ. ಈ ರಸ್ತೆ ತುಂಬಾ ಕಿರಿದಾಗಿರುವುದರಿಂದ ಬಸ್ಸುಗಳು ಬರುವ ಸಂದರ್ಭದಲ್ಲಿ ಮತ್ತೊಂದು ವಾಹನಕ್ಕೆ ಹೋಗಲು ಸ್ಥಳಾವಕಾಶವಿರುವುದಿಲ್ಲ. ಅಲ್ಲದೇ ರಸ್ತೆಯ ದುಸ್ಥಿತಿಯಿಂದಾಗಿ ಶಾಲಾ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದರು.
ಹದಗೆಟ್ಟ ರಸ್ತೆಯಿಂದಾಗಿ ಗ್ರಾಮಕ್ಕೆ ಬಾಡಿಗೆಗೆ ಬರುವ ಆಟೊರಿಕ್ಷಾ ಹಾಗೂ ಬೇರೆ ವಾಹನಗಳ ಚಾಲಕರು ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದು, ಅನಾರೋಗ್ಯ ಪೀಡಿತ ರೋಗಿಗಳು ಆಸ್ಪತ್ರೆಗೆ ತೆರಳಲು ಕೂಡ ಬಹಳ ಕಷ್ಟಕರವಾಗುತ್ತಿದೆ. ಈಗಾಗಲೇ ಎರಡು ರೋಗಿಗಳು ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಅಸುನೀಗಿದ್ದು, 9 ತಿಂಗಳ ಗರ್ಭಿಣಿ ಸ್ತ್ರೀಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಹೆರಿಗೆ ಆಗಿರುವ ಘಟನೆಯೂ ಸಂಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ನಲುಗಿ ಹೋಗಿದ್ದ ಗ್ರಾಮ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಅಲ್ಲದೇ ಪ್ರವಾಹದ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ನಡೆಸುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಇಲ್ಲಿಯ ವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯದೇ ಇರುವುದು ಗ್ರಾಮಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಜನಪ್ರತಿನಿಧಿಗಳು ಖುದ್ದು ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಿ.ಎಂ. ವಸಂತ್, ಎಂ.ವೈ. ಮುಬೀರ್, ಬಿ.ಎನ್. ಪವನ್, ಎಂ.ಎಸ್. ಯೋಗೇಶ್, ಎಂ.ಇ. ಸಿರಾಜ್ ಅಹಮ್ಮದ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss