Monday, August 15, 2022

Latest Posts

ದೇವಸ್ಥಾನದ ಹುಂಡಿಗಳನ್ನು ಸಮರ್ಪಕವಾದ ಸ್ಥಳದಲ್ಲಿಡಿ: ಕೋಟ ಶ್ರೀನಿವಾಸ್ ಪೂಜಾರಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ರಾಮನಗರ:

ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದೇವರಿಗೆ ಸಲ್ಲಿಸುವ ಕಾಣಿಕೆಯನ್ನು ಹುಂಡಿಗಳಲ್ಲಿ ಹಾಕಲು, ಹುಂಡಿಗಳನ್ನು ಭಕ್ತಾಧಿಗಳ ಗಮನಕ್ಕೆ ಬರುವ ರೀತಿ ಸಮರ್ಪಕವಾದ ಸ್ಥಳದಲ್ಲಿ ಇಡಬೇಕು. ಹುಂಡಿಗಳು ಭದ್ರವಾಗಿ ಇರಬೇಕು. ಈ ಕುರಿತಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರ್ ದೇವಸ್ಥಾನದ ಒಳಭಾಗದಲ್ಲಿ ಪರಿಶೀಲನೆ ನಡೆಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ೭ ಎ ವರ್ಗಕ್ಕೆ ಸೇರಿದ ದೇವಸ್ಥಾನಗಳಿದ್ದು, ಅದರಲ್ಲಿ ಹೆಚ್ಚು ಐತಿಹಾಸಿಕ ಹಿನ್ನಲೆ ಹೊಂದಿರುವ ಶ್ರೀ ಅಪ್ರಮೇಯ ದೇವಸ್ಥಾನದಲ್ಲಿ ವಾರ್ಷಿಕವಾಗಿ 50 ಸಾವಿರ ಮಾತ್ರ ಆದಾಯ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕು ಎಂದರು.
ಸಪ್ತಪದಿ ಯೋಜನೆ: ಸರಳ ವಿವಾಹಕ್ಕೆ ಒತ್ತು ನೀಡಲು ಜಾರಿಗೊಳಿಸಿರುವ ಸಪ್ತಪದಿ ಯೋಜನೆಯಡಿ ಆಗಸ್ಟ್ನಿಂದ ಮತ್ತೆ ಪ್ರಾರಂಭವಾಗಲಿದೆ. ಈ ಯೋಜನೆಯಲ್ಲಿ ವಿವಾಹವಾಗುವ ವಧುವಿಗೆ 10 ಸಾವಿರ, ವರನಿಗೆ ಬಟ್ಟೆಗಾಗಿ 5 ಸಾವಿರ ಹಾಗೂ 8 ಗ್ರಾಂ ಚಿನ್ನದ ಗುಂಡು ತಾಳಿಯನ್ನು ನೀಡಲಾಗುವುದು. ಕೋವಿಡ್ ನಿಯಮಗಳನ್ನು ಅನುಸರಿಸಿ 4 ಒಳ್ಳೆಯ ಮಹೊರ್ತಗಳನ್ನು ನಿಗಧಿಪಡಿಸಿ ಕಾರ್ಯಕ್ರಮವನ್ನು ಆಯೋಜಿಸಿ. ಸ್ಥಳೀಯವಾಗಿ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ತಿಳಿಸಿದರು.
ಆಸ್ತಿ ಸಂರಕ್ಷಣೆ: ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನದ ಸುತ್ತ ಇರುವ ದೇವಸ್ಥಾನಕ್ಕೆ ಸೇರಿದ ಆಸ್ತಿಗಳು ಸಂರಕ್ಷಣೆಯಾಗಬೇಕು. ಸರ್ವೆ ನಡೆಸಿ ಒತ್ತುವರಿಯಿದ್ದಲ್ಲಿ ತೆರವುಗೊಳಿಸಬೇಕು. ಕಡುಬಡವರು ದೇವಸ್ಥಾನಕ್ಕೆ ಸೇರಿದ ಆಸ್ತಿಯಲ್ಲಿ ವಾಸ್ತವ್ಯ ಇದ್ದಲ್ಲಿ, ಈ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.
ಮುಜರಾಯಿ ಇಲಾಖೆಗೆ ಸೇರಿದ ಸಿ ವರ್ಗದ ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳು ಇಲ್ಲದಿದ್ದಲ್ಲಿ, ಅಲ್ಲಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದರಿಂದ ದೇವಸ್ಥಾನದ ಅರ್ಚಕರ ಮಾಹಿತಿಯಲ್ಲಿ ಗೊಂದಲ ಉಂಟಾಗುವುದಿಲ್ಲ. ಕೋವಿಡ್ ಹಿನ್ನಲೆಯಲ್ಲಿ ಅರ್ಚಕರಿಗೆ ನೀಡಲಾಗುತ್ತಿರುವ 3000 ಸಹಾಯಧನ ಯೋಜನೆಯ ಬಗ್ಗೆ ತಾಲ್ಲೂಕುವಾರು ಮಾಹಿತಿ ಪಡೆದ ಸಚಿವರು, ತಹಶೀಲ್ದಾರ್‌ಗಳಿಗೆ ವಾರದೊಳಗಾಗಿ ಅರ್ಹ ಅರ್ಚಕರಿಗೆ ಸಹಾಯಧನ ತಲುಪಬೇಕು ಎಂದರು.
ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಿಕೊಂಡು ಪ್ರತಿ ಮಾಹೆ ಸಭೆ ನಡೆಸಬೇಕು. ಧಾರ್ಮಿಕ ಪರಿಷತ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಆಗಬೇಕಿರುವ ಅಭಿವೃದ್ಧಿ ಹಾಗೂ ಕುಂದು ಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ. ಅರಣ್ಯ ಇಲಾಖೆಯ ಸಹಯೋಗದೊಮದಿಗೆ ದೇವಸ್ಥಾನದ ಸುತ್ತ ಹಣ್ಣು, ಔಷಧೀಯ ಸಸ್ಯಗಳನ್ನು ನೆಟ್ಟಿ ಬೆಳಸಿ ಎಂದು ಸಲಹೆ ನೀಡಿದರು.
ಉತ್ತಮ ಗುಣಮಟ್ಟದ ಆಹಾರ ನೀಡಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಿದ್ಯಾರ್ಥಿನಿಲಯಗಳಿಗೆ ಟೆಂಡರ್ ಪಡೆದ ಗುತ್ತಿಗೆದಾರರೇ ಟೆಂಡರ್ ಪಡೆಯುವ ಸಂದರ್ಭದಲ್ಲಿ ಇಲಾಖೆಗೆ ನೀಡುವ ನಿಗಧಿಪಡಿಸಿರುವ ಗುಣಮಟ್ಟದ ಆಹಾರ ಪದಾರ್ಥಗಳನ್ನು ಟೆಂಡರ್ ಮುಗಿಯುವವರೆಗೂ ಒದಗಿಸಬೇಕು. ಗುಣಮಟ್ಟದಲ್ಲಿ ಕಳಪೆ ಅಥವಾ ಟೆಂಡರ್‌ದಾರರ ಬದಲು ಬೇರೆಯವರು ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವುದು ಕಂಡುಬoದಲ್ಲಿ ಕ್ರಮವಹಿಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿಲ್ಲ. ಹಿಂದುಳಿದ ವರ್ಗಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಬಳಿ ಸಮಯವಿದ್ದು, ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಮುದಾಯ ಭವನಗಳ ನಿರ್ಮಾಣಕ್ಕೆ ನೀಡಲಾಗಿರುವ ಸಹಾಯಧನವನ್ನು ಸಂಸ್ಥೆಯವರು ಸದುಪಯೋಗಪಡಿಸಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಐಜೂರು ಗುಡ್ಡದ ಹತ್ತಿರ ಬಂಡೆಗಳ ಮಧ್ಯ ಸುಮಾರು 70 ಅಲೆಮಾರಿ ಕುಟುಂಬದವರು ವಾಸವಾಗಿದ್ದು, ಬಂಡೆಗಳು ಯಾವುದೇ ಸಮಯದಲ್ಲೂ ಬೇಕಾದರೂ ಕುಸಿಯಬಹುದು ಎಂದು ಕೆಲವು ಮುಖಂಡರು ಮಾಹಿತಿ ನೀಡಿರುತ್ತಾರೆ. ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅವರಿಗೆ ಮೊದಲು ನಿವೇಶನ, ಮನೆ, ಕುಡಿಯುವ ನೀರು, ರಸ್ತೆ ಇನ್ನಿತರ ಮೂಲಭೂತ ಸೌಕರ್ಯದೊಂದಿಗೆ ವಾಸ್ತವ್ಯ ಮಾಡುವಂತೆ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು ಪಿ.ಬಿ. ಅವರು ಮಾತನಾಡಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 47 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, 29 ಸ್ವಂತ ಕಟ್ಟಡದಲ್ಲಿ, 15 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 3 ಕಟ್ಟಡಗಳ ಕಾಮಗಾರಿ ಪ್ರಗತಿಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕಟ್ಟಡ ಕಾಮಗಾರಿಗಳು ಗುಣಮಟ್ಟದಿಂದಿರಬೇಕು ಹಾಗೂ ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ., ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪವಿಭಾಗಾಧಿಕಾರಿ ಮಂಜುನಾಥ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಾಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಸಚಿವರು ದೊಡ್ಡಮಳೂರಿನಲ್ಲಿರುವ ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನಕ್ಕೆ ಹಾಗೂ ಚಿಕ್ಕಮಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss