ಕೇರಳ ಬಜೆಟ್: ಮೋಟಾರು ವಾಹನ ತೆರಿಗೆ ಏರಿಕೆ, ಕೆಎಸ್‌ಆರ್‌ಟಿಸಿ ಮೇಲ್ದರ್ಜೆಗೆ

ಹೊಸದಿಗಂತ ವರದಿ,ತಿರುವನಂತಪುರ:

ಕೇರಳ ವಿಧಾನಸಭೆಯಲ್ಲಿ ಶುಕ್ರವಾರ ಹಣಕಾಸು ಇಲಾಖೆ ಸಚಿವ ಕೆ.ಎನ್.ಬಾಲಗೋಪಾಲ್ ಮಂಡಿಸಿದ ಬಜೆಟ್ ನಲ್ಲಿ ದ್ವಿಚಕ್ರ ವಾಹನಗಳ ಮೇಲಿನ ಮೋಟಾರು ವಾಹನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಎರಡು ಲಕ್ಷದ ವರೆಗಿನ ವಾಹನಗಳ ಮೇಲಿನ ಏಕಕಾಲಿಕ ತೆರಿಗೆಯನ್ನು ಶೇಕಡಾ 1ರಷ್ಟು ಏರಿಸಲಾಗಿದೆ. ಇದರಿಂದ 10 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ಮೋಟಾರು ವಾಹನ ತೆರಿಗೆ ಬಾಕಿ ಪಾವತಿ ಮುಂದುವರಿಯಲಿದೆ. ಜೊತೆಗೆ ಹಳೆಯ ವಾಹನಗಳ ಮೇಲಿನ ಹಸಿರು ತೆರಿಗೆಯನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ತ್ರಿಚಕ್ರ ವಾಹನಗಳು, ಖಾಸಗಿ ವಾಹನಗಳು ಮತ್ತು ಮೋಟಾರ್ ಸೈಕಲ್ ಹೊರತುಪಡಿಸಿ ಇತರ ಡೀಸೆಲ್ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸಲಾಗುವುದು. ಕಾರವಾನ್ ವಾಹನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ.
ಸಾರ್ವಜನಿಕ ವಲಯದ ಕೆಎಸ್‌ಆರ್‌ಟಿಸಿಯನ್ನು ನಷ್ಟದಿಂದ ಪಾರು ಮಾಡಲು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಬಜೆಟ್ ನಲ್ಲಿ ಅನುದಾನ ಒದಗಿಸಿದ್ದಾರೆ. ಕೆಎಸ್‌ಆರ್‌ಟಿಸಿ ಆಧುನೀಕರಣಕ್ಕೆ 1000 ಕೋಟಿ ರೂ. ಮೀಸಲಿಡಲಾಗಿದೆ. ಕೆಎಸ್‌ಆರ್‌ಟಿಸಿ ಅಧೀನದಲ್ಲಿ 50 ಹೊಸ ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿಗೆ ಬಜೆಟ್‌ನಿಂದ ಕನಿಷ್ಠ 2000 ಕೋಟಿ ರೂಪಾಯಿ ಆರ್ಥಿಕ ನೆರವು ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಕೊರೋನಾಗೆ ಮೊದಲು ರಾಜ್ಯ ಸರಕಾರದಿಂದ ಪಿಂಚಣಿ ಮಾತ್ರ ಕೇಳಲಾಗಿತ್ತು. ಆದರೆ ಈಗ ಕೆಎಸ್‌ಆರ್‌ಟಿಸಿ ನೌಕರರಿಗೆ ವೇತನ ನೀಡಲು ಕೂಡಾ ಹಣವಿಲ್ಲದಂತಾಗಿದೆ.
ಇದೇ ವೇಳೆ ಕೆ-ರೈಲ್ ಯೋಜನೆಯ ಅಂಗವಾಗಿ ಭೂಸ್ವಾಧೀನಕ್ಕೆ ಕಿಫ್ ಬಿ ಸಂಸ್ಥೆಯಿಂದ 2000 ಕೋಟಿ ರೂ. ಗಳನ್ನು ಮಂಜೂರು ಮಾಡುವುದಾಗಿಯೂ ಹಣಕಾಸು ಸಚಿವರು ಘೋಷಿಸಿದರು. ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ 63,941 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತಿರುವನಂತಪುರದಿಂದ ಕಾಸರಗೋಡು ತನಕ 529.45 ಕಿ.ಮೀ. ಮಾರ್ಗ ನಿರ್ಮಾಣವಾಗಲಿದೆ. ಆದರೆ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ತೀವ್ರವಾಗಿದೆ. ಇದೇ ವೇಳೆ ಬಜೆಟ್ ನಲ್ಲಿ ಯೋಜನೆಗೆ ಹಣ ಮೀಸಲಿರಿಸಿರುವುದು ಮತ್ತಷ್ಟು ಆಂದೋಲನಕ್ಕೆ ಕಾರಣವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!